ಭೂಕಂಪ ಪೀಡಿತ ಟರ್ಕಿಯಲ್ಲಿ ನಾಪತ್ತೆಯಾಗಿರುವ ಬೆಂಗಳೂರಿನ ಟೆಕ್ನಿಷಿಯನ್
ಹೊಸದಿಲ್ಲಿ: ಟರ್ಕಿಯಲ್ಲಿ ಫೆಬ್ರವರಿ 5 ರಂದು ಸಂಭವಿಸಿದ ಪ್ರಬಲ ಭೂಕಂಪನದ ವೇಳೆ ಅಲ್ಲಿದ್ದ ಉತ್ತರಾಖಂಡ ಮೂಲದ ಹಾಗೂ ಬೆಂಗಳೂರಿನ ಕಂಪೆನಿಯೊಂದರ ಟೆಕ್ನಿಷಿಯನ್ ಆಗಿದ್ದ 36 ವರ್ಷದ ವಿಜಯ್ ಕುಮಾರ್ ಅವರ ಬಗ್ಗೆ ಅವರ ಕುಟುಂಬವರ್ಗ ಹಾಗೂ ಕಂಪೆನಿಗೆ ಇನ್ನೂ ಯಾವುದೇ ಸುಳಿವು ದೊರಕದೇ ಇದ್ದರೂ ಅವರ ಕುಟುಂಬ ಇನ್ನೂ ಆಶಾವಾದವನ್ನು ಕಳೆದುಕೊಂಡಿಲ್ಲ ಎಂದು thequint.com ವರದಿ ಮಾಡಿದೆ.
ಟರ್ಕಿಗೆ ಜನವರಿ 25 ರಂದು ಹೋಗಿದ್ದ ವಿಜಯ್ ಅವರು ಮಲಟ್ಯ ಎಂಬಲ್ಲಿನ ಅವ್ಸರ್ ಹೋಟೆಲ್‌ನಲ್ಲಿ ತಂಗಿದ್ದರು. ಭೂಕಂಪದ ವೇಳೆ ಈ ಹೋಟೆಲ್ ಕಟ್ಟಡ ಸಂಪೂರ್ಣ ಕುಸಿದಿರುವುದರಿಂದ ಈಗ ವಿಜಯ್ ಎಲ್ಲಿದ್ದಾರೆಂದು ಅವರ ಕುಟುಂಬ ಹಾಗೂ ಅವರ ಸಹೋದ್ಯೋಗಿಗಳಿಗೆ ತಿಳಿದಿಲ್ಲ.
ಅವರು ಟರ್ಕಿಗೆ ಹೋದಂದಿನಿಂದ ಪ್ರತಿ ರಾತ್ರಿ ತಮ್ಮ ಕುಟುಂಬದ ಜೊತೆಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಆದರೆ ಫೆಬ್ರವರಿ 6 ರಂದು ಅವರ ಕರೆ ಬಂದಿಲ್ಲ. ಮರುದಿನ ಭೂಕಂಪದ ಬಗ್ಗೆ ತಿಳಿದು ಬಂತು ಎಂದು ಅವರ ಸಹೋದರ, ಉತ್ತರಾಖಂಡದಲ್ಲಿರುವ ಪೌರಿ ಗರ್ವಾಲ್ ಹೇಳುತ್ತಾರೆ.
ವಿಜಯ್ ಅವರ ತಂದೆ ಡಿಸೆಂಬರ್ 2022 ರಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಕುಟುಂಬವಿನ್ನೂ ಆ ನೋವಿನಿಂದ ಹೊರಬಂದಿಲ್ಲ. ಅಷ್ಟರಲ್ಲಿ ಈಗ ವಿಜಯ್ ಎಲ್ಲಿದ್ದಾರೆಂದು ತಿಳಿದು ಬಾರದೇ ಇರುವುದು ಹಾಗೂ ಅವರ ಪರಿಸ್ಥಿತಿಯ ಬಗ್ಗೆಯೂ ಯಾವುದೇ ಮಾಹಿತಿ ದೊರಕದೇ ಇರುವುದು ಅವರ ಪತ್ನಿ ಪಿಂಕಿ ಗೌರ್ ಹಾಗೂ 6 ವರ್ಷದ ಪುತ್ರ ಕಂಗಾಲಾಗುವಂತೆ ಮಾಡಿದೆ.
ಮಲಟ್ಯದಲ್ಲಿ ಅಸಿಟೈಲೀನ್ ಅನಿಲ ಸ್ಥಾವರ ಸ್ಥಾಪನೆ ಮತ್ತು ಕಾರ್ಯಾರಂಭ ಸಂಬಂಧಿತ ಕೆಲಸಕ್ಕೆ ಅವರು ತೆರಳಿದ್ದರು. ಜನವರಿಯಲ್ಲಿ ಅವರಿಗೆ ಪಾಸ್‌ಪೋರ್ಟ್, ವೀಸಾ ದೊರಕಿತ್ತು. "ಅವರೊಬ್ಬ ಪ್ರತಿಭಾನ್ವಿತ ಟೆಕ್ನಿಷಿಯನ್ ಆಗಿದ್ದರು. ಪ್ರತಿ ದಿನ ಕೆಲಸದ ಕುರಿತು ವರದಿ ನೀಡುತ್ತಿದ್ದರು. ಆದರೆ ಕಳೆದ ಏಳು ದಿನಗಳಿಂದ ಅವರಿಂದ ಯಾವುದೇ ಮಾಹಿತಿಯಿಲ್ಲ, ಅವರ ಸುರಕ್ಷತೆ ಬಗ್ಗೆ ಕಳವಳಗೊಂಡಿದ್ದೇನೆ," ಎಂದು ವಿಜಯ್ ಕೆಲಸ ಮಾಡುವ ಆಕ್ಸಿಪ್ಲಾಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ರಮೇಶ್ ಸಿದ್ದಪ್ಪ ಹೇಳುತ್ತಾರೆ.
ಇದೀಗ ವಿಜಯ್ ಬಗ್ಗೆ ತಿಳಿಯಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಟರ್ಕಿಯ ಭಾರತೀಯ ದೂತಾವಾಸದ ಸಹಾಯ ಕೋರಲಾಗಿದೆ.
ಈ ಹಿಂದೆ ದಿಲ್ಲಿಯ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದ ವಿಜಯ್ ಆಕ್ಸಿಪ್ಲಾಂಟ್ ಸೇರಿ ಒಂದು ವರ್ಷದ ಮೇಲಾಗಿತ್ತು.
ಟರ್ಕಿಯಲ್ಲಿನ ಸ್ಥಾವರದ ಕೆಲಸ ನಾಲ್ಕು ತಿಂಗಳ ಹಿಂದೆಯೇ ಆರಂಭಗೊಳ್ಳಬೇಕಿದ್ದರೂ ಕೆಲವೊಂದು ಸಮಸ್ಯೆಗಳಿಂದಾಗಿ ಆಗಿರಲಿಲ್ಲ. ಹಿಂದಿನ ಯೋಜನೆಯಂತೆಯೇ ನಡೆಯುತ್ತಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ರಮೇಶ್ ಹೇಳುತ್ತಾರೆ.
ವಿಜಯ್ ಕುಮಾರ್ ಅವರು ಕೆಲಸ ಮಾಡುತ್ತಿದ್ದ ಕಚೇರಿಯ ಕಟ್ಟಡವೂ ಭೂಕಂಪದ ವೇಳೆ ನಾಶವಾಗಿದೆ.
ಆದರೂ ಅವರ ಕುಟುಂಬ ಹಾಗೂ ಕಂಪೆನಿ ಆಶಾಭಾವನೆ ಹೊಂದಿದ್ದು ಯಾರಾದರೂ ಅವರನ್ನು ರಕ್ಷಿಸಿರಬಹುದು ಎಂಬ ಆಶಾಭಾವನೆಯೊಂದಿಗೆ ಅವರ ಕುರಿತ ಸುದ್ದಿಗಾಗಿ ಕಾಯುತ್ತಿವೆ.
ಇದನ್ನು ಓದಿ: ಟರ್ಕಿ, ಸಿರಿಯಾ ಭೂಕಂಪ: ಮೃತರ ಸಂಖ್ಯೆ 16,000ಕ್ಕೆ ಏರಿಕೆ