ಅರೆಸೇನಾ ಪಡೆಗಳಲ್ಲಿ 83,000ಕ್ಕೂ ಅಧಿಕ ಹುದ್ದೆಗಳು ಖಾಲಿ:ಕೇಂದ್ರ
ಹೊಸದಿಲ್ಲಿ,ಫೆ.9: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF)ಗಳಲ್ಲಿ 83,127 ಹುದ್ದೆಗಳು ಖಾಲಿಯಿವೆ ಮತ್ತು ವರ್ಷಾಂತ್ಯದಲ್ಲಿ ಅವುಗಳನ್ನು ತುಂಬಲು ಉದ್ದೇಶಿಸಿರುವುದಾಗಿ ಕೇಂದ್ರವು ರಾಜ್ಯಸಭೆ(Rajya Sabha)ಯಲ್ಲಿ ತಿಳಿಸಿದೆ.
ಬುಧವಾರ ಸದನದಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್(Nithyananda Roy) ಅವರು ಈ ಮಾಹಿತಿಯನ್ನು ನೀಡಿದ್ದಾರೆ.
ಸರಕಾರದ ಹೇಳಿಕೆಯಂತೆ ಸಿಆರ್‌ಪಿಎಫ್‌ನಲ್ಲಿ 29,283, ಬಿಎಸ್‌ಎಫ್‌ನಲ್ಲಿ 19,987,ಸಿಐಎಸ್‌ಎಫ್‌ನಲ್ಲಿ 19,475, ಎಸ್‌ಎಸ್‌ಬಿಯಲ್ಲಿ 8,273,ಅಸ್ಸಾಂ ರೈಫಲ್ಸ್‌ನಲ್ಲಿ 1,666 ಮತ್ತು ಐಟಿಬಿಪಿಯಲ್ಲಿ 4,443 ಹುದ್ದೆಗಳು ಖಾಲಿಯಿವೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭಿಯಾನದ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಮತ್ತು ಅದನ್ನು 2023ರಲ್ಲಿ ಪೂರ್ಣಗಳಿಸಲು ಯೋಜಿಸಲಾಗಿದೆ. 2022 ಜುಲೈ ಮತ್ತು 2023 ಜನವರಿ ನಡುವೆ 32,181 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. 64,444 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು,ಅವು ನೇಮಕಾತಿಯ ವಿವಿಧ ಹಂತಗಳಲ್ಲಿವೆ ಎಂದು ತನ್ನ ಲಿಖಿತ ಉತ್ತರದಲ್ಲಿ ತಿಳಿಸಿರುವ ರಾಯ್,2019ರಲ್ಲಿ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಒಟ್ಟು 27,047ರಷ್ಟಿದ್ದ ಮಹಿಳಾ ಸಿಬ್ಬಂದಿಗಳ ಸಂಖ್ಯೆಯನ್ನು 2023ರಲ್ಲಿ 35,074ಕ್ಕೆ ಹೆಚ್ಚಿಸಲಾಗಿದೆ ಎಂದೂ ಹೇಳಿದರು.
ಹುದ್ದೆಗಳ ಭರ್ತಿಗಾಗಿ ಸರಕಾರವು ಕೈಗೊಂಡಿರುವ ಕೆಲವು ಕ್ರಮಗಳ ಕುರಿತು ರಾಯ್ ಮಂಗಳವಾರ ಲೋಕಸಭೆಯಲ್ಲಿ ವಿವರಿಸಿದ್ದರು. ವೈದ್ಯಕೀಯ ಪರೀಕ್ಷೆಯ ಸಮಯವನ್ನು ಕಡಿಮೆಗೊಳಿಸುವುದು ಮತ್ತು ಕಾನ್‌ಸ್ಟೇಬಲ್ ಹಾಗೂ ಸಾಮಾನ್ಯ ಕರ್ತವ್ಯ ಸಿಬ್ಬಂದಿಗಳಿಗಾಗಿ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡುವಾಗ ಕಟ್-ಆಫ್ ಅಂಕಗಳನ್ನು ತಗ್ಗಿಸುವುದು ಈ ಕ್ರಮಗಳಲ್ಲಿ ಸೇರಿವೆ.
ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಮಾಜಿ ಅಗ್ನಿವೀರರಿಗೆ ಶೇ.10ರಷ್ಟು ಹುದ್ದೆಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ. ಅಲ್ಲದೆ ಗರಿಷ್ಠ ವಯೋಮಿತಿ ಸಡಿಲಿಕೆ ಮತ್ತು ದೈಹಿಕ ಕ್ಷಮತೆ ಪರೀಕ್ಷೆಯಿಂದ ವಿನಾಯಿತಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದೂ ರಾಯ್ ತಿಳಿಸಿದ್ದರು.