×
Ad

ಟರ್ಕಿ: ಅವಶೇಷಗಳಡಿ ಸಿಲುಕಿದ್ದ ಆರರ ಬಾಲಕಿಯನ್ನು ರಕ್ಷಿಸಿದ ಭಾರತೀಯ ತಂಡ

Update: 2023-02-10 07:42 IST

ಹೊಸದಿಲ್ಲಿ: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಧ್ವಂಸಗೊಂಡ ಕಟ್ಟಡಗಳ ಅವಶೇಷದಲ್ಲಿ ಸಿಲುಕಿಕೊಂಡಿದ್ದ ಆರು ವರ್ಷದ ಬಾಲಕಿಯೊಬ್ಬಳನ್ನು ಯಶಸ್ವಿಯಾಗಿ ಹೊರ ತೆಗೆದು ಆಕೆಗೆ ಮರು ಹುಟ್ಟು ನೀಡಿದೆ.

ಹೊದಿಕೆಯಲ್ಲಿ ಸುತ್ತಿದ್ದ, ಕುತ್ತಿಗೆಗೆ ಆಧಾರ ವ್ಯವಸ್ಥೆ ಜೋಡಿಸಿದ್ದ ಪುಟ್ಟ ಬಾಲಕಿಯ ಆರೋಗ್ಯ ಸ್ಥಿತಿಯನ್ನು ವೈದ್ಯರು ತಪಾಸಣೆ ನಡೆಸಿದರು. ಹಳದಿ ಹೆಲ್ಮೆಟ್ ತಂಡದ ಸದಸ್ಯರು ಸ್ಟ್ರೆಚರ್‌ನಲ್ಲಿ ಬಾಲಕಿಯನ್ನು ಹೊರ ತಂದಾಗ ಕಣ್ಣಾಲಿಗಳು ಒದ್ದೆಯಾದವು.

ಆಪರೇಷನ್ ದೋಸ್ತ್ ಕಾರ್ಯಾಚರಣೆಯಡಿ ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್‌ಡಿಆರ್‌ಎಫ್)ಯ ಈ ಸಾಧನೆಯನ್ನು ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮೂಲಕ ಬಣ್ಣಿಸಿದ್ದಾರೆ. "ಪ್ರಕೃತಿ ವಿಕೋಪದ ವೇಳೆ ನಾವು ಟರ್ಕಿ ಜತೆಗಿದ್ದೇವೆ. ಭಾರತದ ಎನ್‌ಡಿಆರ್‌ಎಫ್ ತಂಡ ತಳಮಟ್ಟದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಟೀಮ್ ಇಂಡಿಯಾ-11 ಯಶಸ್ವಿಯಾಗಿ ಆರು ವರ್ಷದ ಬಾಲಕಿಯನ್ನು ಅವಶೇಷಗಳಡಿಯಿಂದ ಹೊರತೆಗೆದಿದೆ" ಎಂದು ಟ್ವೀಟ್ ಮಾಡಿದ್ದಾರೆ. ಈ ಅಪೂರ್ವ ಸಾಧನೆಯನ್ನು ಗೃಹಸಚಿವ ಅಮಿತ್ ಶಾ ಕೂಡಾ ಶ್ಲಾಘಿಸಿದ್ದಾರೆ.

ಈಗಾಗಲೇ ಟರ್ಕಿಯಲ್ಲಿರುವ ಭಾರತದ ರಕ್ಷಣಾ ತಂಡವನ್ನು ಸೇರಿಕೊಳ್ಳಲು ಗುರುವಾರ 51 ಮಂದಿ ಎನ್‌ಡಿಆರ್‌ಎಫ್ ಸಿಬ್ಬಂದಿ ಟರ್ಕಿಗೆ ತೆರಳಿದ್ದಾರೆ ಎಂದು ಮಹಾ ನಿರ್ದೇಶಕ ಅತುಲ್ ಕರ್ವಾಲ್ ಹೇಳಿದ್ದಾರೆ. ಈಗಾಗಲೇ ಭಾರತದ ಎನ್‌ಡಿಆರ್‌ಎಫ್‌ನ 101 ಮಂದಿ ಎರಡು ತಂಡಗಳಲ್ಲಿ ಟರ್ಕಿಯ ಗಜಿಯಂಟೆಪ್ ಪ್ರಾಂತ್ಯದ ನರ್ದಗಿ ಮತ್ತು ಉರ್ಫಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Similar News