ಮೋದಿ ಡಿಗ್ರಿ ಕುರಿತು RTI ಅರ್ಜಿ: ಮಕ್ಕಳಂತಹ ಕುತೂಹಲವು ಸಾರ್ವಜನಿಕ ಹಿತಾಸಕ್ತಿಯಲ್ಲಿಲ್ಲ ಎಂದ ಗುಜರಾತ್‌ ವಿವಿ

ಪ್ರಧಾನಿ ಶೈಕ್ಷಣಿಕ ಅರ್ಹತೆಗಳ ಮಾಹಿತಿ ನೀಡಲು ನಿರಾಕರಣೆ

Update: 2023-02-10 10:30 GMT

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ವಿವರಗಳನ್ನು ಕೋರಿದ ಮನವಿಯನ್ನು ವಿರೋಧಿಸಿರುವ ಗುಜರಾತ್‌  ವಿಶ್ವವಿದ್ಯಾಲಯ ಈ ಕುರಿತು ಹೈಕೋರ್ಟಿನಲ್ಲಿ ವಾದ ಮಂಡಿಸಿ ಯಾರದ್ದೋ "ಬೇಜವಾಬ್ದಾರಿಯ ಮಕ್ಕಳಂತಹ ಕುತೂಹಲವನ್ನು" ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕ ಹಿತಾಸಕ್ತಿ ಎಂದು ಪರಿಗಣಿಸಲಾಗದು" ಎಂದು ವಿವಿ ಹೇಳಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗಳ ಕುರಿತ ಮಾಹಿತಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ನೀಡುವಂತೆ 2016 ರಲ್ಲಿ ಕೇಂದ್ರ ಮಾಹಿತಿ ಆಯೋಗ ಹೊರಡಿಸಿದ ಆದೇಶ ಪ್ರಶ್ನಿಸಿ ವಿವಿ ಹೈಕೋರ್ಟ್‌ ಕದ ತಟ್ಟಿತ್ತು.

ಕೇಜ್ರಿವಾಲ್‌ ಅವರ ಮತದಾರರ ಗುರುತು ಕಾರ್ಡ್‌ ಕುರಿತಾದ ಅರ್ಜಿಯನ್ನು ಆಯೋಗ ಪರಾಮರ್ಶಿಸುತ್ತಿದ್ದ ವೇಳೆ, ಪ್ರಧಾನಿ ತಮ್ಮ ಪದವಿಗಳ ಕುರಿತು ವಿವರಗಳನ್ನು ಬಹಿರಂಗಪಡಿಸಿದರೆ ತಾವು ಕೂಡ ಅಗತ್ಯ ಮಾಹಿತಿ ನೀಡುವುದಾಗಿ ಕೇಜ್ರಿವಾಲ್‌ ಹೇಳಿದ್ದರು. ಕೇಜ್ರಿವಾಲ್‌ ಅವರ ಪ್ರತಿಕ್ರಿಯೆಯನ್ನು ಓರ್ವ ನಾಗರಿಕರಾಗಿ ಅವರ ಆರ್‌ಟಿಐ ಅರ್ಜಿ ಎಂದು ಆಯೋಗ ಪರಿಗಣಿಸಲು ನಿರ್ಧರಿಸಿತ್ತು.

ಮೋದಿಗೆ ದಿಲ್ಲಿ ವಿವಿ 1978 ರಲ್ಲಿ ಬಿಎ ಪದವಿ ಹಾಗೂ 1983 ರಲ್ಲಿ ಗುಜರಾತ್‌ ವಿವಿ ಎಂಎ ಪದವಿ ನೀಡಿದೆ ಎಂದು ಬಿಜೆಪಿ ಹೇಳುತ್ತಿದೆ ಆದರೆ ಈ ಪದವಿಗಳು ನಕಲಿ ಎಂದು ಆಪ್‌ ವಾದಿಸುತ್ತಿದೆ.

ಗುರುವಾರ ವಿವಿ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Tushar Mehta) ಮಾತನಾಡಿ, ಅಡಗಿಸಲು ಏನೂ ಇಲ್ಲ, ಮಾಹಿತಿ ಬಹಿರಂಗಪಡಿಸಲು ವಿವಿಗೆ ಬಲವಂತಪಡಿಸುವಂತಿಲ್ಲ ಎಂದಿದ್ದರು. ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಗೆ ಡಾಕ್ಟರೇಟ್‌ ಪದವಿ ಇದೆಯೇ ಅಥವಾ ಆತ ಅನಕ್ಷರಸ್ಥನೇ ಎಂಬುದು ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ ಈ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಲ್ಲ, ಅವರ ಗೌಪ್ಯತೆಯೂ ಬಾಧಿತವಾಗಿದೆ ಎಂದು ಮೆಹ್ತಾ ಹೇಳಿದರು.

ವಿವಿ ಈಗಾಗಲೇ ಮೋದಿ ಅವರ ಪದವಿಯನ್ನು ಸಾರ್ವಜನಿಕವಾಗಿ ಲಭ್ಯಗೊಳಿಸಿದೆ, ಒಬ್ಬರ ಕುತೂಹಲವನ್ನು ತಣಿಸಲು ಆರ್‌ಟಿಐ ಕಾಯಿದೆಯನ್ನು ಬದಲಿಸಬಹುದೇ ಎಂಬ ಕುರಿತು ಮಾತ್ರ ತಾವು ವಾದಿಸುತ್ತಿರುವುದಾಗಿ ಅವರು ಹೇಳಿದರು.

ಅರ್ಜಿಯ ಮೇಲಿನ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿದೆ.

ಇದನ್ನು ಓದಿ: ಮೋದಿಗೆ ಅದಾನಿಯೇ ʻಪವಿತ್ರ ಗೋವುʼ: ಶಿವಸೇನೆ ವ್ಯಂಗ್ಯ

Similar News