ಹಿಂಡೆನ್‌ಬರ್ಗ್‌ ವಿರುದ್ಧದ ಹೋರಾಟಕ್ಕೆ ಅಮೆರಿಕಾದ ಖ್ಯಾತ ಕಾನೂನು ಸಂಸ್ಥೆಯನ್ನು ಗೊತ್ತುಪಡಿಸಿದ ಅದಾನಿ ಸಂಸ್ಥೆ

Update: 2023-02-10 12:09 GMT

ಹೊಸದಿಲ್ಲಿ: ಹಿಂಡೆನ್‌ಬರ್ಗ್‌ (Hindenburg) ಸಂಶೋಧನಾ ಸಂಸ್ಥೆ ತನ್ನ ವರದಿಯಲ್ಲಿ ಗೌತಮ್‌ ಅದಾನಿ (Gautam Adani) ನೇತೃತ್ವದ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಷೇರುಗಳಿಗೆ ಸಂಬಂಧಿಸಿದಂತೆ ಹಾಗೂ ಹಣಕಾಸಿಗೆ ಸಂಬಂಧಿಸಿದಂತೆ ವ್ಯಾಪಕ ಅವ್ಯವಹಾರಗಳ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆ ಅಮೆರಿಕಾದ ಖ್ಯಾತ ಕಾನೂನು ಸಂಸ್ಥೆ ವಾಚೆಲ್‌, ಲಿಪ್ಟನ್‌, ರೋಸೆನ್‌ & ಕಾಟ್ಝ್‌ ಅನ್ನು ಗೊತ್ತುಪಡಿಸಿದೆ.

ಷೇರು ಮೌಲ್ಯವನ್ನು ಕೃತಕವಾಗಿ ಏರಿಸಿ ಸ್ಟಾಕ್‌ ಮಾರ್ಕೆಟ್‌ ತಿರುಚುವಿಕೆ ಹಾಗೂ ಲೆಕ್ಕಪತ್ರ ಅವ್ಯವಹಾರಗಳ ಆರೋಪವನ್ನು ಹಿಂಡೆನ್‌ಬರ್ಗ್‌ ವರದಿ ಮಾಡಿದ ನಂತರ ಅದಾನಿ ಸಂಸ್ಥೆಯ ಷೇರುಗಳಿಗೆ ಭಾರೀ ಹೊಡೆತ ಬಿದ್ದ ನಡುವೆಯೇ ಕಾನೂನು ಹೋರಾಟದ ಬಗ್ಗೆ ಯೋಚಿಸುತ್ತಿರುವುದಾಗಿ ಸಂಸ್ಥೆ ಹೇಳಿತ್ತು.

ಕಾನೂನು ಹೋರಾಟ ನಡೆಸುವುದಾದರೆ ಸ್ವಾಗತ ಎಂದು ವರದಿ ಹೊರತಂದಿದ್ದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆ ಕೂಡ ತಿಳಿಸಿತ್ತು. ಅದೇ ಸಮಯ ಹಿಂಡೆನ್‌ಬರ್ಗ್‌ ಸಂಸ್ಥೆ ತನ್ನ ವರದಿಯಲ್ಲಿನ ಮಾಹಿತಿಗಳನ್ನು ಪುನರುಚ್ಛರಿಸಿತ್ತು.

ಅದಾನಿ ಸಂಸ್ಥೆ ಈಗ ಗೊತ್ತುಪಡಿಸಿರುವ ಕಾನೂನು ಸಂಸ್ಥೆಯನ್ನೇ 2022 ರಲ್ಲಿ ಟ್ವಿಟರ್‌ ಇಂಕ್‌ ಸಂಸ್ಥೆಯು ಜಗತ್ತಿನ ಶ್ರೀಮಂತ ವ್ಯಕ್ತಿ, ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ವಿರುದ್ಧ ಕಾನೂನು ಹೋರಾಟಕ್ಕೆ ಗೊತ್ತುಪಡಿಸಿತ್ತಲ್ಲದೆ 44 ಬಿಲಿಯನ್‌ ಟ್ವಿಟರ್‌ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್‌ ಅವರನ್ನು ಒಪ್ಪಿಸುವಲ್ಲಿ ಸಫಲವಾಗಿತ್ತು.

ಇದನ್ನೂ ಓದಿ: ಅದಾನಿ ಸಂಸ್ಥೆ ಪ್ರಶಸ್ತಿ ಸಮಾರಂಭದ ಪ್ರವರ್ತಕ ಎಂದು ತಿಳಿದು ದೇವಿ ಪ್ರಶಸ್ತಿ ನಿರಾಕರಿಸಿದ ಖ್ಯಾತ ತಮಿಳು ಕವಯತ್ರಿ

Similar News