×
Ad

ನೀರವ್ ಮೋದಿ ಖಾತೆಯ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಕೋರ್ಟ್‌ಗೆ ತಿಳಿಸಿದ ಎರಡು ಬ್ಯಾಂಕ್‌ಗಳು

Update: 2023-02-10 16:40 IST

ಮುಂಬೈ: ದೇಶದಿಂದ ಪಲಾಯನಗೈದಿರುವ ವಜ್ರದ ವ್ಯಾಪಾರಿ ನೀರವ್ ಮೋದಿ (Nirav Modi) ಮಾಲಕತ್ವದ Firestar International Limited ಖಾತೆಯಲ್ಲಿ ಠೇವಣಿ ಇರಿಸಿರುವ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲವೆಂದು ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank) ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank of Maharashtra) ಗುರುವಾರ ಮುಂಬೈನ ನ್ಯಾಯಾಲಯವೊಂದಕ್ಕೆ ತಿಳಿಸಿವೆ ಎಂದು Hindustan Times ವರದಿ ಮಾಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು ರೂ. 13,000 ಕೋಟಿ ವಂಚಿಸಿದ್ದಾರೆ ಎಂಬ ಆರೋಪ ನೀರವ್ ಮೋದಿ ಮತ್ತು ಅವರ ಸಹಚರರ ಮೇಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಒದಗಿಸಿದ್ದ ಸ್ವಾಧೀನ ಪತ್ರವನ್ನು ಬಳಸಿಕೊಂಡು ಲಾಭ ಮತ್ತು ವಂಚನೆಯ ವಹಿವಾಟು ನಡೆಸಿದ ಆರೋಪವನ್ನು ಅವರೆಲ್ಲ ಎದುರಿಸುತ್ತಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ ಅಡಿ ನಡೆಸುತ್ತಿದೆ. ಗುರುವಾರ, ಅಧಿಕೃತ ನಗದೀಕರಣ ಅಧಿಕಾರಿ ಸಲ್ಲಿಸಿದ ಪ್ರಮಾಣ ಪತ್ರದ ವಿಚಾರಣೆಯನ್ನು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ ನ್ಯಾಯಾಲಯವು ನಡೆಸಿತು. ಆ ಪ್ರಮಾಣ ಪತ್ರದಲ್ಲಿ  ನೀರವ್ ಮೋದಿ ಸಂಸ್ಥೆಯ ಖಾತೆಗಳಲ್ಲಿರುವ ರೂ. 37 ಕೋಟಿ ಹಣವನ್ನು ಕೋಟಕ್ ಮಹೀಂದ್ರ ಬ್ಯಾಂಕ್, ಯೂನಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಇನ್ನೂ ಬಿಡುಗಡೆ ಮಾಡಬೇಕಿದೆ ಎಂದು ನಗದೀಕರಣ ಅಧಿಕಾರಿ ತಿಳಿಸಿದ್ದಾರೆ. ಸಾಲ ವಸೂಲಾತಿಗಾಗಿ ಈ ನಗದೀಕರಣ ಅಧಿಕಾರಿಯನ್ನು ರಾಷ್ಟ್ರೀಯ ಸಾಂಸ್ಥಿಕ ಕಾನೂನು ನ್ಯಾಯಮಂಡಳಿಯು ನೇಮಿಸಿತ್ತು.

ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ನೀರವ್ ಮೋದಿ ಸಂಸ್ಥೆಯ ಖಾತೆಯನ್ನು ಮೊದಲು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡರೆ, ನಂತರ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕೋಟಕ್ ಮಹೀಂದ್ರ ಬ್ಯಾಂಕ್ ನ್ಯಾಯಾಲಯಕ್ಕೆ ತಿಳಿಸಿತು. ಹಾಗೆಯೇ ನೀರವ್ ಮೋದಿ ಸಂಸ್ಥೆಯ ಜಮಾ ಖಾತೆಯಲ್ಲಿರುವ ಹಣವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿತು.

ಇದಕ್ಕೂ ಮುನ್ನ, ಜುಲೈ, 2022ರಲ್ಲಿ ದೇಶದಿಂದ ಪಲಾಯನಗೈದಿರುವ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸಂಬಂಧಿಸಿದ ರೂ. 253.62 ಕೋಟಿ ಮೊತ್ತವನ್ನು ಕೇಂದ್ರ ತನಿಖಾ ಸಂಸ್ಥೆಗಳು ಬ್ಯಾಂಕ್‌ಗಳಿಂದ ಮುಟ್ಟುಗೋಲು ಹಾಕಿಕೊಂಡಿದ್ದವು‌.

ಇದನ್ನೂ ಓದಿ: ಮೋದಿಗೆ ಅದಾನಿಯೇ ʻಪವಿತ್ರ ಗೋವುʼ: ಶಿವಸೇನೆ ವ್ಯಂಗ್ಯ

Similar News