ಉಡುಪಿ: ​ರಾಜ್ಯಮಟ್ಟ ಯಕ್ಷಗಾನ ಸಮ್ಮೇಳನಕ್ಕೆ ನಾಳೆ (ಫೆ.11) ಚಾಲನೆ

Update: 2023-02-10 15:54 GMT

ಉಡುಪಿ: ಕರಾವಳಿ ಭಾಗದಲ್ಲಿ ಶ್ರಮಜೀವಿಗಳ ಮನೋರಂಜನೆ  ಹಾಗೂ ಮನೋಉಲ್ಲಾಸದ ಭಾಗವಾಗಿ ಪ್ರಾರಂಭಗೊಂಡ ಗಂಡುಕಲೆ ‘ಯಕ್ಷಗಾನ’ ಇಂದು ಸಮಾಜದ ಎಲ್ಲಾ ವರ್ಗದಿಂದಲೂ ಮಾನ್ಯತೆ ಪಡೆದು ವಿಶ್ವ ಮನ್ನಣೆಯನ್ನೂ ಪಡೆದಿರುವ ಸಂದರ್ಭದಲ್ಲಿ ಪ್ರಥಮ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ನಾಳೆಯಿಂದ (ಫೆ.11) ಎರಡು ದಿನಗಳ ಕಾಲ ನಗರದ ಎಂಜಿಎಂ ಕಾಲೇಜಿನ ಎಎಲ್‌ಎನ್ ರಾವ್ ಕ್ರೀಡಾಂಗಣದಲ್ಲಿ ನಡೆಯಲು ಎಲ್ಲಾ ಸಿದ್ಧತೆಗಳು ಮುಗಿದಿವೆ.

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆಯುವ ಸಮ್ಮೇಳನದ ‘ಸಮ್ಮೇಳನಾಧ್ಯಕ್ಷರಾಗಿ’ ಯಕ್ಷಗಾನ ವಿದ್ವಾಂಸ, ಕಲಾವಿದ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿ ಆಯ್ಕೆಯಾಗಿದ್ದಾರೆ. ಸಮ್ಮೇಳನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವ ಕಾರ್ಯಕ್ರಮವಿದೆಯಾದರೂ ಅದಿನ್ನೂ ಖಚಿತಗೊಂಡಿಲ್ಲ.

ರಾಜ್ಯದ ಹೆಮ್ಮೆಯ ಕಲೆಯಾಗಿ ಪ್ರಬುದ್ಧತೆಗೆ ಬಂದಿರುವ ಯಕ್ಷಗಾನವನ್ನು ಹಾಗೂ ಅದರ ಅಸಂಖ್ಯಾತ ಕಲಾವಿದರನ್ನು  ಪ್ರೋತ್ಸಾಹಿಸಲು ಪ್ರತಿ ವರ್ಷ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ನಡೆಸಲು ಸರಕಾರ ನಿರ್ಧರಿಸಿದ್ದು, ಈ ಬಾರಿ ಈಗಾಗಲೇ ಎರಡು ಕೋಟಿ ರೂ. ಅನುದಾನವನ್ನು ಇಲಾಖೆಯ ಮೂಲಕ ಬಿಡುಗಡೆ ಮಾಡಿದೆ.

ಸಮ್ಮೇಳನಕ್ಕೆ ಪ್ರಧಾನ ವೇದಿಕೆ ಮತ್ತು ಎರಡು ಉಪವೇದಿಕೆಗಳನ್ನು ನಿರ್ಮಿಸಲಾಗಿದ್ದು, ಮಲ್ಪೆ ಶಂಕರನಾರಾಯಣ ಸಾಮಗ ವೇದಿಕೆ, ಕೆರೆಮನೆ ಶಿವರಾಮ ಹೆಗಡೆ ವೇದಿಕೆ ಹಾಗೂ ಅಳಕೆ ರಾಮಯ್ಯ ರೈ ವೇದಿಕೆ ಎಂದು ನಾಮಕರಣ ಮಾಡಲಾಗಿದೆ.ಸುಮಾರು 10 ಸಾವಿರ ಮಂದಿ ಕುಳಿತುಕೊಳ್ಳುವ ಪ್ರಧಾನ ಸಭಾಂಗಣದಲ್ಲಿ ಉದ್ಘಾಟನೆ, ಸಮಾರೋಪ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಉಪವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೆಲವು ಗೋಷ್ಠಿಗಳು ನಡೆಯಲಿವೆ. ಸಮ್ಮೇಳನದಲ್ಲಿ ಕನಿಷ್ಠ 50ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಸಂಘಟಕರದ್ದು.

ನಾಳೆ ಬೆಳಗ್ಗೆ 9:00 ಗಂಟೆಗೆ ಕಡಿಯಾಳಿ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷರನ್ನು ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಎರಡು ದಿನಗಳ ಕಾಲ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ 1500ಕ್ಕೂ ಅಧಿಕ ಯಕ್ಷ ಶಿಕ್ಷಣ ಪಡೆಯುತ್ತಿರುವ  ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಕಲಾವಿದರು ಭಾಗವಹಿಸಲಿದ್ದಾರೆ. 

ಉದ್ಘಾಟನಾ ಕಾರ್ಯಕ್ರಮದಲ್ಲಿ ಯಕ್ಷಗಾನ ಸಮ್ಮೇಳನದಲ್ಲಿ ಪ್ರಕಟಗೊಂಡ ಯಕ್ಷಗಾನಕ್ಕೆ ಸಂಬಂಧಿಸಿದ 18 ಪುಸ್ತಕಗಳನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಲಿದ್ದಾರೆ. ಇವುಗಳಲ್ಲಿ ಡಾ.ಪಾದೇಕಲ್ಲು ವಿಷ್ಣು ಭಟ್ಟ, ಡಾ.ಕೆ.ಎಂ.ರಾಘವ ನಂಬಿಯಾರ್, ಡಾ.ಎಂ.ಪ್ರಭಾಕರ ಜೋಶಿ, ಡಾ.ಚಿಕ್ಕಣ್ಣ ಯಣ್ಣಿಕಟ್ಟಿಯಂಥ ವಿದ್ವಾಂಸರು ಬರೆದ ಕೃತಿಗಳೂ ಸೇರಿವೆ.

75 ಮಂದಿ ಸಾಧಕರಿಗೆ ಸನ್ಮಾನ: ಸಮ್ಮೇಳನದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸೇವೆ ಸಲ್ಲಿಸಿದ 75 ಮಂದಿ ಹಿರಿಯ ಕಲಾವಿದರನ್ನು ಹಾಗೂ ಸಂಸ್ಥೆಗಳನ್ನು ಸನ್ಮಾನಿಸಲಾಗುತ್ತಿದೆ. ಬಲಿಪ ನಾರಾಯಣ ಭಾಗವತ, ಗೋಡೆ ನಾರಾಯಣ ಹೆಗಡೆ, ಐರೋಡಿ ಗೋವಿಂದಪ್ಪ, ಪುಂಡರೀಕಾಕ್ಷ ಉಪಾಧ್ಯಾಯ, ಪೇತ್ರಿ ಮಾಧವ ನಾಯ್ಕರಿಂದ ಹಿಡಿದು ಲೀಲಾವತಿ ಬೈಪಾಡಿತ್ತಾಯರವರೆಗೆ ಹಿರಿಯ-ಕಿರಿಯ ಕಲಾವಿದರು ಇದರಲ್ಲಿ ಸೇರಿದ್ದಾರೆ.

ವೈವಿಧ್ಯಮಯ ಮಳಿಗೆಗಳು: ಈಗಾಗಲೇ ಅಗಲಿರುವ 200 ಮಂದಿ ಪ್ರಸಿದ್ಧ ಯಕ್ಷಗಾನ ಕಲಾವಿದರ -ಬಡಗುತಿಟ್ಟು ಹಾಗೂ ತೆಂಕುತಿಟ್ಟು- ಕುರಿತು ಕಿರು ಪರಿಚಯದೊಂದಿಗೆ ಅವರ ಭಾವಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಯಕ್ಷಗಾನದಲ್ಲಿ ಬಳಕೆ ಯಾಗುವ ಕಶೆ ಸೀರೆ, ಆಭರಣ, ಗೆಜ್ಜೆ ಸೇರಿದಂತೆ ವಿವಿಧ ಪರಿಕರಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇರುತ್ತದೆ. ಯಕ್ಷಗಾನ ಪ್ರದರ್ಶನದ ವೇಳೆ ಮಕ್ಕಳ ವಿಶೇಷ ಆಕರ್ಷಣೆಯಾದ ಯಕ್ಷಗಾನ ಬಣ್ಣದ ಮನೆ ‘ಚೌಕಿ’ಯು ಸಹ ಇಲ್ಲಿ ಕಂಡುಬರಲಿದೆ. ಇನ್ನು ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕ ಮಳಿಗೆ, ಕರಕುಶಲ ವಸ್ತುಗಳ ಮಳಿಗೆ ಹಾಗೂ ಆಹಾರ ಮಳಿಗೆಗೂ ಸಮ್ಮೇಳನದಲ್ಲಿ ಇರಲಿವೆ.

ಆರು ಗೋಷ್ಠಿಗಳು: ಸಮ್ಮೇಳನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು ಆರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 18 ಮಂದಿ ವಿವಿಧ ವಿಷಯಗಳನ್ನು ಲೇಖನ ಮಂಡಿಸಲಿದ್ದು, 200 ಮಂದಿ ವಿಶೇಷ ಆಹ್ವಾನಿತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಒಂದು ಗೋಷ್ಠಿ ಮೂಡಲಪಾಯದ ಕುರಿತಂತೆ ಇರುತ್ತದೆ ಎಂದರು.‘ಯಕ್ಷ ಶಿಕ್ಷಣದ ಸವಾಲುಗಳು’, ‘ಯಕ್ಷಗಾನ ಕನ್ನಡದ ಅಸ್ಮಿತೆ’,‘ಮಹಿಳಾ ಯಕ್ಷಗಾನ ಚಿಂತನೆ’   ಸೇರಿದಂತೆ ವೈವಿಧ್ಯಮಯ ವಿಷಯದ ಮೇಲೆ ಗೋಷ್ಠಿ ನಡೆಯಲಿವೆ.

27 ತಂಡಗಳ ಪ್ರದರ್ಶನ: ಸಮ್ಮೇಳನದ ವೇಳೆ ಹೊರದೇಶ, ಹೊರರಾಜ್ಯಗಳು ಸೇರಿದಂತೆ ಒಟ್ಟು 27ತಂಡಗಳು ಯಕ್ಷಗಾನ ಪ್ರದರ್ಶನ ನೀಡಲಿವೆ. ಇವುಗಳಲ್ಲಿ ಎರಡು ಗೊಂಬೆಯಾಟ ಹಾಗೂ ಎರಡು ಹರಿಕಥೆಗಳೂ ಸೇರಿವೆ. ಇದರೊಂದಿಗೆ ತುಳು ಯಕ್ಷಗಾನ ಪ್ರದರ್ಶನ, ಘಟ್ಟದ ಕೋರೆ, ಕೇಳಿಕೆ, ಮೂಡಲಪಾಯ ಯಕ್ಷಗಾನದ ಪ್ರದರ್ಶನವೂ ಇರುತ್ತದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟ ತಿಳಿಸಿದ್ದಾರೆ.

ವೇಷ ಹಾಕಿ ಸೆಲ್ಫಿಗೂ ಅವಕಾಶ
ಸಮ್ಮೇಳನದಲ್ಲಿ ಆಸಕ್ತರು, ಯಕ್ಷಗಾನ ಪ್ರೇಮಿಗಳು ವಿವಿಧ ಯಕ್ಷಗಾನದ ವೇಷ ಧರಿಸಿ, ಮುಖವರ್ಣಿಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅಥವಾ ಪೋಟೊ ತೆಗೆಸಿಕೊಳ್ಳುವ ವ್ಯವಸ್ಥೆಯನ್ನು ಸಹ ಸಮ್ಮೇಳನದ ಮಳಿಗೆಯಲ್ಲಿ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Similar News