ನಾನು ಪ್ರಧಾನಿಯಾಗಿಯಲ್ಲ, ಕುಟುಂಬದ ಸದಸ್ಯನಾಗಿ ಬಂದಿದ್ದೇನೆ: ಬೊಹ್ರಾ ಮುಸ್ಲಿಮರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

Update: 2023-02-10 18:19 GMT

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ದಾವೂದಿ ಬೋಹ್ರಾ ಮುಸ್ಲಿಮರ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ಅನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಮುನ್ನ ಮುಂಬೈನ ಅತ್ಯಂತ ಪ್ರಭಾವಿ ಸಮುದಾಯವೊಂದರ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಅಂಧೇರಿಯ ಉಪನಗರದಲ್ಲಿರುವ ಮರೋಲ್‌ನಲ್ಲಿರುವ ದಾವೂದಿ ಬೋಹ್ರಾ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾದ ಅಲ್ಜಮಿಯಾ-ತುಸ್-ಸೈಫಿಯಾ ಹೊಸ ಕ್ಯಾಂಪಸ್‌ನಲ್ಲಿ ಸಮುದಾಯದ ಮುಖ್ಯಸ್ಥ ಸೈಯದ್ನಾ ಮುಫದ್ದಲ್ ಸೈಫುದ್ದೀನ್ ಅವರೊಂದಿಗೆ ಕೈ ಹಿಡಿದುಕೊಂಡು ಪ್ರಧಾನಿ ಮೋದಿ ನಡೆದಿದ್ದಾರೆ.

"ಸಯ್ಯದ್ನಾ ಸಾಹಬ್ ಅವರ ಕುಟುಂಬದ ನಾಲ್ಕು ತಲೆಮಾರುಗಳ ಬಗ್ಗೆ ನಾನು ತಿಳಿದಿದ್ದೇನೆ, ನಾನು ಇಲ್ಲಿ ಕುಟುಂಬ ಸದಸ್ಯನಾಗಿ ಇದ್ದೇನೆ, ಪ್ರಧಾನ ಮಂತ್ರಿಯಾಗಿ ಅಲ್ಲ, ಈ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ 150 ವರ್ಷಗಳ ಕನಸನ್ನು ನನಸು ಮಾಡಿದ್ದೀರಿ" ಎಂದು ಅವರು ಸಮುದಾಯದ ಸದಸ್ಯರನ್ನು ಶ್ಲಾಘಿಸಿದ್ದಾರೆ.  

ಸಮುದಾಯದ ಕಲಿಕೆಯ ಸಂಪ್ರದಾಯಗಳು ಮತ್ತು ಸಾಹಿತ್ಯ ಸಂಸ್ಕೃತಿಯನ್ನು ರಕ್ಷಿಸಲು ಸಂಸ್ಥೆಯು ಕಾರ್ಯನಿರ್ವಹಿಸುತ್ತದೆ. ಉದ್ಘಾಟನೆಗೊಂಡಿರುವ ಹೊಸ ಕೇಂದ್ರದಲ್ಲಿ ಅರೇಬಿಕ್ ಕಲಿಕೆಯನ್ನು ಸಹ ನೀಡಲಾಗುತ್ತದೆ ಎಂದು ndtv.com ವರದಿ ಮಾಡಿದೆ.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ "ಅಭೂತಪೂರ್ವ ನಂಬಿಕೆಯ ವಾತಾವರಣ" ಸೃಷ್ಟಿಯಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಶಿಕ್ಷಣದಲ್ಲಿ ದಾಪುಗಾಲು ಹಾಕುತ್ತಿರುವ ತಮ್ಮ ಸರ್ಕಾರವನ್ನು ಸ್ವತಃ ಕೊಂಡಾಡಿದ್ದಾರೆ.

"ಕಳೆದ ಎಂಟು ವರ್ಷಗಳಲ್ಲಿ, ಪ್ರತಿ ವಾರಕ್ಕೆ ಒಂದು ವಿಶ್ವವಿದ್ಯಾಲಯ ಮತ್ತು ಎರಡು ಕಾಲೇಜುಗಳಂತೆ ತೆರೆಯಲಾಗಿದೆ" ಎಂದು ಅವರು ಹೇಳಿದರು.

2004 ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ 145 ವೈದ್ಯಕೀಯ ಕಾಲೇಜುಗಳು ಬಂದವು. ತಾವು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ, 260 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದವರು ಹೇಳಿದ್ದಾರೆ.

Similar News