×
Ad

ಎಚ್-1ಬಿ ವೀಸಾ ಹೊಂದಿರುವವರಿಗೆ ಸಿಹಿ ಸುದ್ಧಿ ನೀಡಿದ ಅಮೆರಿಕ

Update: 2023-02-11 00:18 IST

ವಾಷಿಂಗ್ಟನ್, ಫೆ.10: ಎಚ್-1ಬಿ ಮತ್ತು ಎಲ್1 ವೀಸಾ ಹೊಂದಿರುವ ಸಾವಿರಾರು ವಿದೇಶಿ ಉದ್ಯೋಗಿಗಳಿಗೆ ಅನುಕೂಲವಾಗುವ ನಿರ್ಧಾರವೊಂದನ್ನು ಅಮೆರಿಕ ಸರಕಾರ ಯೋಜಿಸಿದ್ದು, ಕೆಲವು ವಿಭಾಗಗಳಲ್ಲಿ ಪ್ರಾಯೋಗಿಕ ಆಧಾರದಲ್ಲಿ ದೇಶದಲ್ಲಿಯೇ ಎಚ್-1ಬಿ ವೀಸಾ ಮರುದೃಢೀಕರಣ ಪ್ರಕ್ರಿಯೆ ಮುಂದುವರಿಕೆಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವನ್ನು ಗಮನಿಸಿ ಮುಂದಿನ ವರ್ಷಗಳಲ್ಲಿ ಇದನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ವರ್ಷದ ಕೊನೆಯಲ್ಲಿ ಪ್ರಾರಂಭವಾಗಲಿರುವ ಈ ಪ್ರಾಯೋಗಿಕ ಯೋಜನೆಯು ಸಂಪೂರ್ಣವಾಗಿ ಕಾರ್ಯಗತಗೊಂಡರೆ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ತಾಂತ್ರಿಕ ವೃತ್ತಿಪರರು(ಐಟಿ ಪ್ರೊಫೆಷನಲ್ಸ್)ಗೆ ದೊಡ್ಡ ಪರಿಹಾರವಾಗಲಿದೆ.

 2004ರವರೆಗೆ, ವಲಸೆ-ಅಲ್ಲದ ವೀಸಾಗಳ ಕೆಲವು ವರ್ಗಗಳು, ವಿಶೇಷವಾಗಿ ಎಚ್-1ಬಿ ವೀಸಾಗಳನ್ನು ಅಮೆರಿಕದೊಳಗೇ ನವೀಕರಿಸುವ ಅಥವಾ ಮರುಮುದ್ರಣ ಮಾಡುವ ವ್ಯವಸ್ಥೆಯಿತ್ತು. ಆ ಬಳಿಕ, ಎಚ್-1ಬಿ ವೀಸಾದ ಅವಧಿ ಮುಗಿದೊಡನೆ ವೀಸಾದಾರರು ತಮ್ಮ ದೇಶಕ್ಕೆ ಮರಳಿ, ತಮ್ಮ ದೇಶದಲ್ಲಿರುವ ಅಮೆರಿಕದ ಕಾನ್ಸುಲೇಟ್ ಕಚೇರಿಯಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿ, ನವೀಕರಣಗೊಂಡ ಬಳಿಕ ಅಮೆರಿಕಕ್ಕೆ ಮರಳಬೇಕಾಗಿದೆ. ಆದರೆ ಇದು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುವ ವಿದೇಶದ ಉದ್ಯೋಗಿಗಳಿಗೆ ಮತ್ತು ಅವರನ್ನು ನೇಮಕ ಮಾಡಿಕೊಂಡ ಅಮೆರಿಕದ ಸಂಸ್ಥೆಗಳಿಗೆ ದೊಡ್ಡ ಸಮಸ್ಯೆಯಾಗಿತ್ತು, ಯಾಕೆಂದರೆ ಕೆಲವೊಮ್ಮೆ ವೀಸಾ ಕಾಯುವ ಸಮಯ 800 ದಿನಕ್ಕೂ ಹೆಚ್ಚಿರುತ್ತದೆ. ಅಮೆರಿಕದ ಬಹುತೇಕ ಸಂಸ್ಥೆಗಳು ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತೀ ವರ್ಷ ಸಾವಿರಾರು ಐಟಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತದೆ.

ಇದೀಗ ನವೀಕರಣ ಪ್ರಕ್ರಿಯೆಯನ್ನು ಪ್ರಾಯೋಗಿಕ ಆಧಾರದಲ್ಲಿ ದೇಶದೊಳಗೆ ನಡೆಸಲು ಅಮೆರಿಕ ಸರಕಾರ ಯೋಜನೆ ರೂಪಿಸಿದೆ. ಇದರಿಂದ ವಿದೇಶಿ ಉದ್ಯೋಗಿಗಳು ನವೀಕರಣ ಪ್ರಕ್ರಿಯೆಗಾಗಿ ತಮ್ಮ ದೇಶಕ್ಕೆ ಮರಳಿ, ಅಲ್ಲಿ ವರ್ಷಗಟ್ಟಲೆ ಕಾಯುವ ಕಿರಿಕಿರಿ ತಪ್ಪುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Similar News