ಅದಾನಿ ಗುಂಪಿನ ಕಂಪೆನಿಗಳ ರೇಟಿಂಗ್ ಮುನ್ನೋಟವನ್ನು ‘ಋಣಾತ್ಮಕ’ವಾಗಿಸಿದ ಮೂಡೀಸ್

Update: 2023-02-11 16:41 GMT

ಮುಂಬೈ, ಫೆ. 11: ಜಾಗತಿಕ ರೇಟಿಂಗ್ಸ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಸರ್ವಿಸ್(Moody's Investors Service) ಶುಕ್ರವಾರ ಅದಾನಿ ಗುಂಪಿನ(Adani Group) ನಾಲ್ಕು ಕಂಪೆನಿಗಳ ತನ್ನ ರೇಟಿಂಗ್ ಮುನ್ನೋಟವನ್ನು ‘ಸ್ಥಿರ’ದಿಂದ ‘ಋಣಾತ್ಮಕ’ಕ್ಕೆ ಬದಲಾಯಿಸಿದೆ.

ಅದಾನಿ ಗುಂಪಿನ ಕಂಪೆನಿಗಳು ಶೇರು ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸಿ ತಮ್ಮ ಶೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿವೆ ಹಾಗೂ ತಪ್ಪು ಲೆಕ್ಕಪತ್ರಗಳನ್ನು ಕೊಡುತ್ತಿವೆ ಎಂಬುದಾಗಿ ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆ(Hindenburg Research)ಯು ಆರೋಪಿಸಿದ ಬಳಿಕ ಕಂಪೆನಿಗಳ ಶೇರುಗಳು ಭಾರೀ ಪ್ರಮಾಣದಲ್ಲಿ ಕುಸಿದಿವೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ರಿಸ್ಟ್ರಿಕ್ಟಡ್ ಗ್ರೂಪ್ (ಎಜಿಇಎಲ್ ಆರ್‌ಜಿ-1), ಅದಾನಿ ಟ್ರಾನ್ಸ್‌ಮಿಶನ್‌ಸ್ಟೆಪ್-ವನ್ ಲಿಮಿಟೆಡ್ ಮತ್ತು ಅದಾನಿ ಇಲೆಕ್ಟ್ರಿಸಿಟಿ ಮುಂಬೈ ಲಿಮಿಟೆಡ್‌ನ ರೇಟಿಂಗ್ ಮುನ್ನೋಟವನ್ನು ‘ಋಣಾತ್ಮಕ’ಕ್ಕೆ ಬದಲಾಯಿಸಿದೆ.

ಅದೇ ವೇಳೆ, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಶಲ್ ಎಕನಾಮಿಕ್ ರೆನ್ ಲಿಮಿಟೆಡ್, ಅದಾನಿ ಇಂಟರ್‌ನ್ಯಾಶನಲ್ ಕಂಟೇನರ್ ಟರ್ಮಿನಲ್ ಪ್ರೈವೇಟ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ ರಿಸ್ಟ್ರಿಕ್ಟಡ್ ಗ್ರೂಪ್ (ಎಜಿಇಎಲ್ ಆರ್‌ಜಿ-2) ಮತ್ತು ಅದಾನಿ ಟ್ರಾನ್ಸ್‌ಮಿಶನ್ ರಿಸ್ಟ್ರಿಕ್ಟಡ್ ಗ್ರೂಪ್ 1 ಕಂಪೆನಿಗಳ ರೇಟಿಂಗ್ ಮುನ್ನೋಟವನ್ನು ‘ಸ್ಥಿರ’ದಲ್ಲೇ ಉಳಿಸಿಕೊಂಡಿದೆ.

‘‘ಅದಾನಿ ಗುಂಪಿನ ಕಂಪೆನಿಗಳ ಶೇರುಗಳ ಮೌಲ್ಯಗಳಲ್ಲಿ ಗಣನೀಯ ಹಾಗೂ ಕ್ಷಿಪ್ರ ಕುಸಿತದ ಹಿನ್ನೆಲೆಯಲ್ಲಿ ರೇಟಿಂಗ್ ಮುನ್ನೋಟದಲ್ಲಿ ಬದಲಾವಣೆಯಾಗಿದೆ’’ ಎಂದು ಮೂಡೀಸ್ ಹೇಳಿದೆ.

ಜನವರಿ 24ರಂದು ಅಮೆರಿಕದ ಹಿಂಡನ್‌ಬರ್ಗ್ ರಿಸರ್ಚ್ ಕಂಪೆನಿಯ ವರದಿ ಹೊರಬಿದ್ದ ಬಳಿಕ, ಅದಾನಿ ಗುಂಪಿನ ಕಂಪೆನಿಗಳು ಸುಮಾರು 9 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ ಎನ್ನಲಾಗಿದೆ.

ಜಾಗತಿಕ ಶೇರು ಸೂಚ್ಯಂಕ ನಿರ್ವಾಹಕ ಮೋರ್ಗನ್ ಸ್ಟಾನ್ಲಿ ಕ್ಯಾಪಿಟಲ್ ಇಂಟರ್‌ನ್ಯಾಶನಲ್ (ಎಮ್‌ಎಸ್‌ಸಿಐ), ಅದಾನಿ ಗುಂಪಿನ ನಾಲ್ಕು ಕಂಪೆನಿಗಳ ‘ಫ್ರೀ ಫ್ಲೋಟ್’ ಸ್ಥಾನಮಾನವನ್ನು ಕಡಿತಗೊಳಿಸಿದ ಎರಡು ದಿನಗಳ ಬಳಿಕ, ಮೂಡೀಸ್ ಕೂಡಾ ಆ ಕಂಪೆನಿಗಳ ರೇಟಿಂಗ್ ಮುನ್ನೋಟದಲ್ಲಿ ಬದಲಾವಣೆ ಮಾಡಿದೆ.

ಫ್ರೀ ಫ್ಲೋಟ್ ಎಂದರೆ, ಅಂತರ್‌ರಾಷ್ಟ್ರೀಯ ಹೂಡಿಕೆದಾರರ ಖರೀದಿಗೆ ಮುಕ್ತವಾಗಿ ಲಭ್ಯವಿರುವ ಕಂಪೆನಿಯೊಂದರ ಶೇರುಗಳು.

Similar News