×
Ad

ಮೀಮ್ಸ್‌, ಟ್ರೋಲ್‌, ಸಿನಿಮಾಗಳ ಮೂಲಕ ಆನ್‌ಲೈನ್‌ ವಂಚನೆಗಳ ವಿರುದ್ಧ ಪೊಲೀಸರ ವಿನೂತನ ಜಾಗೃತಿ...

Update: 2023-02-12 15:28 IST

ಜೈಪುರ: 'ಪ್ರೇಮಿಗಳ ದಿನಾಚರಣೆ'ಯ ವಾರದಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳು ಹಾಗೂ ಆನ್‌ಲೈನ್ ಆಮಿಷಗಳ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲು ಬಾಲಿವುಡ್‌ನ ಜನಪ್ರಿಯ ಗೀತೆಗಳು ಹಾಗೂ ಸಂಭಾಷಣೆಯ ತುಣುಕುಗಳನ್ನು ಮೀಮ್‌ಗೆ ಅಳವಡಿಸಿ ಜಾಗೃತಿಯ ಸಾಧನವಾಗಿ ರಾಜಸ್ಥಾನ ಪೊಲೀಸರು ಬಳಸುತ್ತಿದ್ದಾರೆ.

ವಂಚಕರ ಜಾಲಕ್ಕೆ ಸುಲಭವಾಗಿ ಬೀಳುವ ಅಪಾಯವಿರುವ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಹಾಸ್ಯಮಯ ತಿರುವು ಹೊಂದಿರುವ ಸೃಜನಾತ್ಮಕ ಸಂದೇಶಗಳನ್ನು ರಾಜಸ್ಥಾನ ಪೊಲೀಸ್ ಇಲಾಖೆಯು ತನ್ನ ಅಧಿಕೃತ ಫೇಸ್‌ಬುಕ್ ಪುಟ ಹಾಗೂ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಭೂಗತ ವ್ಯಕ್ತಿಗಳನ್ನು ಯುವಕರು ಅನುಸರಿಸದಂತೆ ಮಾಡಲು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಬಳಸಲಾಗುತ್ತಿದೆ.

ಫೆಬ್ರವರಿ 9ರ 'ಚಾಕೊಲೇಟ್ ದಿನ'ದಂದು ಭಾರಿ ಯಶಸ್ವಿ ಚಿತ್ರವಾದ '3 ಈಡಿಯಟ್ಸ್'ನ ಪೋಸ್ಟರ್ ಮಾದರಿಯನ್ನು ಬಳಸಲಾಗಿತ್ತು. ಆ ಚಿತ್ರದ ಜನಪ್ರಿಯ ಸಂಭಾಷಣೆಯಾದ "ಜಹಾಪನಾ, ನೀವು ದೊಡ್ಡವರು. ಚಾಕೊಲೇಟ್ ನೀಡಿ" ಅನ್ನು ಶೀರ್ಷಿಕೆಯಾಗಿ ಬಳಸಿಕೊಂಡು, "ಡಿಜಿಟಲ್ ಚಾಕೊಲೇಟ್‌ನಿಂದ ದೂರ ಉಳಿದು, ಎಲ್ಲವೂ ಸರಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸೈಬರ್ ಸುರಕ್ಷತೆಯನ್ನು ಅಳವಡಿಸಿಕೊಳ್ಳಿ" ಎಂಬ ಮುನ್ನೆಚ್ಚರಿಕೆಯನ್ನು ನೀಡಿತ್ತು.

ಇನ್ನೊಂದು ಸಂದೇಶದಲ್ಲಿ ರೋಸ್ ದಿನವಾದ ಫೆಬ್ರವರಿ 7ರಂದು ವಾಟ್ಸ್ ಆ್ಯಪ್ ಇನ್‌ಬಾಕ್ಸ್ ಚಿತ್ರದಲ್ಲಿ ಇಬ್ಬರು ವ್ಯಕ್ತಿಗಳು ಸಂಭಾಷಣೆ ನಡೆಸುತ್ತಾ, ಆ ಪೈಕಿ ಒಬ್ಬಾತ ಆನ್‌ಲೈನ್ ವಂಚನೆಯಿಂದ ಹೇಗೆ ತನ್ನೆಲ್ಲ ಉಳಿತಾಯದ ದುಡ್ಡನ್ನು ಕಳೆದುಕೊಂಡೆ ಹೇಳುತ್ತಿರುವ ಸಂಭಾಷಣೆಯ ಚಿತ್ರವನ್ನು ಮುದ್ರಿಸಲಾಗಿದೆ. ಈ ಚಿತ್ರದ ಕೆಳಗೆ, "ನೀವು ಹೀಗೇ ಮಾಡುತ್ತಿದ್ದರೆ, ನಿಮ್ಮ ಎಲ್ಲ ದುಡ್ಡನ್ನೂ ಕಳೆದುಕೊಳ್ಳುತ್ತೀರಿ" ಎಂಬ 1996ರಲ್ಲಿ ಬಿಡುಗಡೆಯಾಗಿದ್ದ 'ಸಾಜನ್ ಚಲೆ ಸಸುರಾಲ್' ಚಿತ್ರದ ಗೀತೆಯ ತುಣುಕನ್ನು ಶೀರ್ಷಿಕೆಯಾಗಿ ನೀಡಲಾಗಿದೆ.

ಹಾಗೆಯೇ ಯುವತಿಯರಿಗೆ ನಕಲಿ ಸಾಮಾಜಿಕ ಮಾಧ್ಯಮಗಳ ಕುರಿತು ಜಾಗೃತಿ ಮೂಡಿಸಲು ಸೃಜನಾತ್ಮಕ ಸಂದೇಶ ರೂಪಿಸಿದೆ.

Similar News