×
Ad

ಆಂಧ್ರ ರಾಜ್ಯಪಾಲರಾಗಿ ನಝೀರ್ ನೇಮಕ ಬೆನ್ನಲ್ಲೇ ಬಿಜೆಪಿ-ಕಾಂಗ್ರೆಸ್ ವಾಕ್ಸಮರ

Update: 2023-02-13 08:19 IST

ಹೊಸದಿಲ್ಲಿ:  ದಕ್ಷಿಣ ಕನ್ನಡ ಮೂಲದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಎಸ್.ಅಬ್ದುಲ್ ನಝೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು ನೇಮಕ ಮಾಡಿದ ಬೆನ್ನಲ್ಲೇ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಆರಂಭವಾಗಿದೆ. ಈ ನೇಮಕಾತಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯ ಎಂದು ಕಾಂಗ್ರೆಸ್ ಬಣ್ಣಿಸಿದ್ದರೆ, ಈ ಹಿಂದೆಯೂ ಇಂಥಹ ನೇಮಕ ನಡೆದಿತ್ತು ಎಂದು ಬಿಜೆಪಿ ತಿರುಗೇಟು ನೀಡಿದೆ.

ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಅವರು ಮಾಜಿ ಬಿಜೆಪಿ ಸಂಸದ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಮಾಡಿದ ಭಾಷಣದ ತುಣುಕನ್ನು ಟ್ವೀಟ್ ಮಾಡಿದ್ದಾರೆ. "ನ್ಯಾಯಮೂರ್ತಿಗಳ ನಿವೃತ್ತಿ ಬಳಿಕದ ಹುದ್ದೆಯ ಅಪೇಕ್ಷೆಯು, ನಿವೃತ್ತಿ ಮುನ್ನ ನೀಡುವ ತೀರ್ಪುಗಳ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಅಪಾಯ" ಎಂದು ಜೇಟ್ಲಿ ಈ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದರು.

ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲೂನಿ ತಿರುಗೇಟು ನೀಡಿ, ನಿವೃತ್ತ ನ್ಯಾಯಾಧೀಶರಿಗೆ ಸಾಂವಿಧಾನಿಕ ಹುದ್ದೆ ನೀಡುವುದು ಇದೇ ಮೊದಲಲ್ಲ ಎಂದು ಪ್ರತಿಪಾದಿಸಿದ್ದಾರೆ. ನಿವೃತ್ತಿ ಬಳಿಕ ನ್ಯಾಯಮೂರ್ತಿಗಳನ್ನು ಸಂವಿಧಾನಾತ್ಮಕ ಹುದ್ದೆಗಳಿಗೆ ನೇಮಕ ಮಾಡಬಾರದು ಎಂಬ ಯಾವ ನಿರ್ಬಂಧವೂ ಇಲ್ಲ. ಈ ಹಿಂದೆ ಕೂಡಾ ಹಲವು ಉದಾಹರಣೆಗಳಿವೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಸಿಂಗ್ವಿ ಈ ವಾದವನ್ನು ತಳ್ಳಿಹಾಕಿದ್ದು, ಇಂಥಹ ನೇಮಕಾತಿಯನ್ನು ಹಿಂದೆ ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕೆ ಕ್ಷಮಿಸಬಹುದು. ನಾವು ಈ ವ್ಯಕ್ತಿ ಬಗ್ಗೆ ಅಪಾರ ಗೌರವ ಹೊಂದಿದ್ದೇವೆ. ಆದರೆ ತಾತ್ವಿಕವಾಗಿ ನಾವು ಇದನ್ನು ವಿರೋಧಿಸುತ್ತೇವೆ. ಇದು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುವ ಭಾವನೆ ನಮ್ಮದು ಎಂದು ಜೇಟ್ಲಿಯವರ ಅಭಿಪ್ರಾಯವನ್ನು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ನೇಮಕವನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸಮರ್ಥಿಸಿಕೊಂಡಿದ್ದು, ಸಂವಿಧಾನಾತ್ಮಕ ಅಂಶಗಳಿಂದ ಭಾರತ ನಿರ್ದೇಶಿಸಲ್ಪಡುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

Similar News