×
Ad

ಟರ್ಕಿ ಭೂಕಂಪದಲ್ಲಿ 128 ಗಂಟೆಗಳ ನಂತರ ರಕ್ಷಿಸಲ್ಪಟ್ಟ ಮಗುವಿನ ಮತ್ತೊಂದು ವೀಡಿಯೊ ವೈರಲ್

Update: 2023-02-13 13:59 IST

ಇಸ್ತಾಂಬುಲ್: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ಅವಶೇಷಗಳ ಅಡಿಯಲ್ಲಿ 128 ಗಂಟೆ ಕಾಲ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು ಟರ್ಕಿಯ ಅಂಟಾಕ್ಯಾದಲ್ಲಿ ಧ್ವಂಸಗೊಂಡ ಕಟ್ಟಡದಿಂದ ಪರಿಹಾರ ತಂಡಗಳು ಯಶಸ್ವಿಯಾಗಿ ಹೊರ ತೆಗೆದ ವೀಡಿಯೊ ವೈರಲ್ ಆದ ಮರುದಿನ   ಅದೇ ಮಗುವಿನ ಮತ್ತೊಂದು ವೀಡಿಯೊ ಕೂಡ ಜನಮೆಚ್ಚುಗೆ ಪಡೆದಿದೆ.

ಮುಖದ ಮೇಲೆ ಧೂಳು ಹಾಗೂ  ಕೊಳೆಯೊಂದಿಗಿದ್ದ ಮಗುವಿನ ಚಿತ್ರಗಳು ಹಾಗೂ  ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.  ಇದೀಗ ಒಂದು ದಿನದ ನಂತರ, ಧೂಳಿನಿಂದ ಮುಕ್ತವಾಗಿ ಸ್ವಚ್ಛಗೊಂಡಿರುವ ಹಾಗೂ ಆಹಾರವನ್ನು ಸೇವಿಸಿ ಉಲ್ಲಸಿತವಾಗಿರುವ ಮಗುವಿನ  ಮತ್ತೊಂದು ವೀಡಿಯೊ ವೈರಲ್ ಆಗಿದೆ.

" ಇಲ್ಲಿ ದಿನದ ಹೀರೋ ಇದ್ದಾರೆ! ಭೂಕಂಪ ನಡೆದ  128 ಗಂಟೆಗಳ ನಂತರ ರಕ್ಷಿಸಲ್ಪಟ್ಟ ಈ ಮಗು. ಸ್ನಾನ ಮಾಡಿ,  ರುಚಿಕರವಾದ ಊಟ ಸೇವಿಸಿದ ನಂತರ ತೃಪ್ತವಾಗಿದೆ" ಎಂದು ಓರ್ವ ವ್ಯಕ್ತಿ ವೀಡಿಯೊದೊಂದಿಗೆ ಬರೆದಿದ್ದಾರೆ.

ಈ ಕಿರು ಅವಧಿಯ ಕ್ಲಿಪ್  ಟ್ವಿಟರ್‌ನಲ್ಲಿ ಸುಮಾರು ಎರಡು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

"ದೇವರು ಆಶೀರ್ವದಿಸಲಿ. ಸ್ವಲ್ಪ ಭರವಸೆ ಮೂಡಿಸಿದ್ದಕ್ಕಾಗಿ ಧನ್ಯವಾದಗಳು. ಟರ್ಕಿ ಹಾಗೂ  ಸಿರಿಯಾದಲ್ಲಿ ನಡದಿರುವ ದುರಂತ ನಿಜವಾಗಿಯೂ ಭಯಾನಕ,"  ಎಂದು ಇನ್ನೋರ್ವ ವ್ಯಕ್ತಿ  ಕಾಮೆಂಟ್ ಮಾಡಿದ್ದಾರೆ.

"ಮಗುವನ್ನು ಸಲಹುವವರು ಯಾರಾದರೂ ಇದ್ದಾರೆ ಎಂದು ಭಾವಿಸುತ್ತೇವೆ... ವಿಶ್ವವು ಮಗುವಿಗೆ ಸಂತೋಷದ ಹಾದಿಯನ್ನು ರೂಪಿಸಲಿ" ಎಂದು ಮತ್ತೊಬ್ಬರು ಬರೆದಿದ್ದಾರೆ.

ರಕ್ಷಣಾ ಕಾರ್ಯಪಡೆಯು  ಎರಡು ವರ್ಷದ ಬಾಲಕಿ, ಆರು ತಿಂಗಳ ಗರ್ಭಿಣಿ ಮಹಿಳೆ ಹಾಗೂ  ನಾಲ್ಕು ವರ್ಷದ ಮಗು ಮತ್ತು ಆಕೆಯ ತಂದೆಯನ್ನು ಜೀವಂತವಾಗಿ ಹೊರ ತೆಗೆದಿದೆ..

ವಿಶ್ವಸಂಸ್ಥೆಯ ಪ್ರಕಾರ, ಟರ್ಕಿ ಹಾಗೂ  ಸಿರಿಯಾದಾದ್ಯಂತ ಕನಿಷ್ಠ 870,000 ಜನರಿಗೆ ಆಹಾರದ ಅಗತ್ಯವಿದೆ. ಭೂಕಂಪದಿಂದ ಸುಮಾರು 26 ಮಿಲಿಯನ್ ಜನರು ತೊಂದರೆಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

Similar News