ಇಬ್ಬರು ನೂತನ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

ಸುಪ್ರೀಂ ಕೋರ್ಟ್ ಈಗ ಪೂರ್ಣ ಬಲದಲ್ಲಿ: ಇಬ್ಬರು ನ್ಯಾಯಾಧೀಶರಿಂದ ಪ್ರಮಾಣವಚನ ಸ್ವೀಕಾರ

Update: 2023-02-13 16:07 GMT

ಹೊಸದಿಲ್ಲಿ, ಫೆ. 13: ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಅರವಿಂದ ಕುಮಾರ್‌ಗೆ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಸೋಮವಾರ ಪ್ರಮಾಣವಚನ ಬೋಧಿಸಿದರು. ಇದರೊಂದಿಗೆ ಸುಪ್ರೀಂ ಕೋರ್ಟ್ ಈಗ 34 ನ್ಯಾಯಾಧೀಶರೊಂದಿಗೆ ಪೂರ್ಣ ಬಲವನ್ನು ಹೊಂದಿದೆ.

ಕೇಂದ್ರ ಸರಕಾರವು ಶುಕ್ರವಾರ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಬಿಂದಾಲ್ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕುಮಾರ್‌ರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಿಸಿ ಅಧಿಸೂಚನೆ ಹೊರಡಿಸಿತ್ತು.

ಸುಪ್ರೀಂ ಕೋರ್ಟ್ ಕೊಲೀಜಿಯಮ್ ಜನವರಿ 31ರಂದು ಈ ಇಬ್ಬರು ನ್ಯಾಯಾಧೀಶರ ಹೆಸರುಗಳನ್ನು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿತ್ತು. ಬಿಂದಾಲ್‌ರ ಆಯ್ಕೆ ಅವಿರೋಧವಾಗಿತ್ತು ಎಂದು ತನ್ನ ಶಿಫಾರಸಿನಲ್ಲಿ ಕೊಲೀಜಿಯಮ್ ಹೇಳಿತ್ತು. ಆದರೆ, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಕುಮಾರ್‌ರ ಆಯ್ಕೆ ಬಗ್ಗೆ ಕೊಲೀಜಿಯಮ್ ಸದಸ್ಯ ಕೆ.ಎಮ್. ಜೋಸೆಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ; ಮುಂದಿನ ದಿನಗಳಲ್ಲಿ ಅವರನ್ನು ಸುಪ್ರೀಂ ಕೋರ್ಟ್ ಹುದ್ದೆಗೆ ಪರಿಗಣಿಸಬಹುದಾಗಿತ್ತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ ಎಂದು ಕೊಲೀಜಿಯಮ್ ಹೇಳಿತ್ತು.

ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೊಲೀಜಿಯಮ್ ಮತ್ತು ಕೇಂದ್ರ ಸರಕಾರದ ನಡುವೆ ಸಂಘರ್ಷ ಏರ್ಪಟ್ಟಿರುವ ಹಂತದಲ್ಲೇ ಈ ಇಬ್ಬರು ನ್ಯಾಯಾಧೀಶರ ನೇಮಕಾತಿಗಳು ನಡೆದಿವೆ. ನ್ಯಾಯಾಧೀಶರನ್ನು ನೇಮಿಸುವ ಕೊಲೀಜಿಯಮ್ ವ್ಯವಸ್ಥೆಯನ್ನು ಕಾನೂನು ಸಚಿವ ಕಿರಣ್ ರಿಜೀಜು ಪದೇ ಪದೇ ಟೀಕಿಸಿದ್ದಾರೆ.

ಸರಕಾರ ನಡೆಸುವವರು ನ್ಯಾಯಾಂಗದ ವಿರುದ್ಧ ನೀಡಿರುವ ಹೇಳಿಕೆಗಳನ್ನು ನಾವು ಸ್ವೀಕರಿಸಿಲ್ಲ ಎಂದು ಡಿಸೆಂಬರ್ 8ರಂದು ಸುಪ್ರೀಂ ಕೋರ್ಟ್ ಹೇಳಿತ್ತು.

Similar News