ಅಯೋಧ್ಯೆ: ರಾಮ ಮಂದಿರವನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ್ದ ಆರೋಪಿಯ ಬಂಧನ

Update: 2023-02-13 09:36 GMT

ಅಯೋಧ್ಯೆ: ಅಯೋಧ್ಯೆ ಹಾಗೂ ದಿಲ್ಲಿ ಮೆಟ್ರೊ ಬಳಿಯಲ್ಲಿನ ರಾಮಜನ್ಮಭೂಮಿ ಸಂಕೀರ್ಣವನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಮಹಾರಾಷ್ಟ್ರ ಮೂಲದ ದಂಪತಿಗಳಾದ ಅನಿಲ್ ರಾಮ್‌ದಾಸ್ ಘೋಕ್ಡೆ ಹಾಗೂ ವಿದ್ಯಾಶಂಕರ್ ಘೋಕ್ಡೆಯನ್ನು ಶುಕ್ರವಾರ ಅಯೋಧ್ಯೆ ಪೊಲೀಸರು ಬಂಧಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

ಅಂತರ್ಜಾಲ ಕರೆಯ ಮೂಲಕ ಬೆದರಿಕೆ ಒಡ್ಡಿದ್ದ ಅನಿಲ್, ಆ ಮೊಬೈಲ್ ಸಂಖ್ಯೆಯು ತನ್ನ ಗೆಳತಿಯ ಸಹೋದರನದೆಂದು ಬಿಂಬಿಸಲು ತಂತ್ರಾಂಶವೊಂದನ್ನು ಬಳಸಿದ್ದ. ಈ ಕುರಿತು ಪ್ರತಿಕ್ರಿಯಿಸಿರುವ ಅಯೋಧ್ಯೆ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಎಸ್.ಬಿ.ಗೌತಮ್, ಆನ್‌ಲೈನ್‌ನಲ್ಲಿ ಯುವತಿಯರನ್ನು ಗೆಳತಿಯರನ್ನಾಗಿ ಮಾಡಿಕೊಳ್ಳುತ್ತಿದ್ದ ಅನಿಲ್, ತನ್ನನ್ನು ತಾನು ನವೋದ್ಯಮದಲ್ಲಿ ತೊಡಗಿಸಿಕೊಂಡಿರುವ ಅವಿವಾಹಿತ ಎಂದು ಬಿಂಬಿಸಿಕೊಂಡು, ಅವರನ್ನು ವಿವಾಹವಾಗುವ ಭರವಸೆ ನೀಡಿ, ಅವರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದ ಮೂಲಕ ಬಲೆಗೆ ಬೀಳಿಸಿಕೊಂಡಿದ್ದ ದಿಲ್ಲಿಯ ಯುವತಿಯೊಬ್ಬಳಿಗೆ ಅನಿಲ್ ವಿವಾಹಿತ ಎಂಬ ಸಂಗತಿ ತಿಳಿದು, ಅದನ್ನು ತನ್ನ ಪೋಷಕರು ಹಾಗೂ ಸಹೋದರನಿಗೆ ತಿಳಿಸಿದ್ದಳು. ಆಕೆಯ ಸಹೋದರ ಈ ವಿಷಯವನ್ನು ಪೊಲೀಸರಿಗೆ ತಿಳಿಸುವುದಾಗಿ ಅನಿಲ್‌ಗೆ ಬೆದರಿಕೆ ಒಡ್ಡಿದ್ದ. ಇದಾದ ನಂತರ ಅನಿಲ್ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದ. ಈ ವಿಷಯವನ್ನು ಪೊಲೀಸರಿಗೆ ವರದಿ ಮಾಡಲಿಲ್ಲ ಎಂಬ ಕಾರಣಕ್ಕೆ ಅನಿಲ್ ಪತ್ನಿಯನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ನಿವಾಸಿ ಮನೋಜ್ ಎಂಬುವವರಿಗೆ ಕರೆ ಮಾಡಿದ್ದ ಅನಿಲ್, ಫೆಬ್ರವರಿ 2ರಂದು ರಾಮಜನ್ಮಭೂಮಿ ಮಂದಿರ ಸಂಕೀರ್ಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದ. ಸದನ್ ನಿವಾಸಿಯಾದ ಮನೋಜ್‌ ಅವರು ದಿಲ್ಲಿಯಿಂದ ಸಂಜೆ ಸುಮಾರು 5 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಯಿಂದ ಆ ಕರೆ ಸ್ವೀಕರಿಸಿದ್ದರು. ಆ ಕರೆಯಲ್ಲಿ, "ಬೆಳಗ್ಗೆ 10 ಗಂಟೆಯೊಳಗೆ ರಾಮಜನ್ಮಭೂಮಿ ಮಂದಿರ ಸಂಕೀರ್ಣವನ್ನು ಸ್ಫೋಟಿಸಲಾಗುವುದು" ಎಂದು ಬೆದರಿಕೆ ಒಡ್ಡಲಾಗಿತ್ತು. ಮನೋಜ್ ಕೂಡಲೇ ಈ ಸಂಗತಿಯನ್ನು ಪೊಲೀಸ್ ನಿಯಂತ್ರಣ ಕೊಠಡಿಯ ಗಮನಕ್ಕೆ ತಂದಿದ್ದ. ನಂತರ ಈ ಮಾಹಿತಿಯನ್ನು ಭಯೋತ್ಪಾದಕ ನಿಗ್ರಹ ದಳ ಹಾಗೂ ವಿಶೇಷ ಕಾರ್ಯಪಡೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿತ್ತು.

ಪ್ರಕರಣದ ಕುರಿತು ತನಿಖೆ ಕೈಗೊಂಡ ಪೊಲೀಸರು ಹಾಗೂ ಸೈಬರ್ ತಂಡವು ಮೊದಲಿಗೆ ದಿಲ್ಲಿ ವಿಳಾಸವನ್ನು ಪತ್ತೆ ಹಚ್ಚಿದವು. ಅಲ್ಲಿಗೆ ಧಾವಿಸಿದ ತಂಡವು, ಬಿಲಾಲ್ ಅನ್ನು ವಶಕ್ಕೆ ಪಡೆದವು. ತನಿಖೆಯ ನಂತರ ಇದರ ಹಿಂದೆ ಆತನ ಸಹೋದರಿಯ ಗೆಳಯನ ಕೈವಾಡ ಇರುವುದು ಮನದಟ್ಟಾಯಿತು ಎಂದು ವೃತ್ತ ನಿರೀಕ್ಷಕ ಎಸ್.ಬಿ.ಗೌತಮ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಯೋಧ್ಯೆ ನಗರದ ಪೊಲೀಸ್ ವರಿಷ್ಠಾಧಿಕಾರಿ ಮಧುಬನ್ ಸಿಂಗ್, "ಅನಿಲ್ ತನ್ನನ್ನು ತಾನು ಮುಸ್ಲಿಂ ಎಂದು ಬಿಂಬಿಸಿಕೊಂಡು ಬಿಲಾಲ್ ಸಹೋದರಿಯನ್ನು ಬಲೆಗೆ ಬೀಳಿಸಿಕೊಂಡಿದ್ದ. ಆಕೆಯಿಂದ ರೂ. 16 ಲಕ್ಷ ಹಣವನ್ನೂ ಪಡೆದಿದ್ದ ಆತ, ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸುತ್ತಿದ್ದ" ಎಂದು ತಿಳಿಸಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ನಂತರ ಹಲವಾರು ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಅನಿಲ್‌ನನ್ನು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿರುವ ಅಯೋಧ್ಯೆ ಪೊಲೀಸರು, ಆತನಿಂದ ಒಂಬತ್ತು ಮೊಬೈಲ್ ಫೋನ್‌ಗಳು, ಮೂರು ಆಧಾರ್ ಕಾರ್ಡ್‌ಗಳು, ಪ್ಯಾನ್ ಕಾರ್ಡ್‌ಗಳು, ಆರು ಎಟಿಎಂ ಕಾರ್ಡ್‌ಗಳು, ವಿದ್ಯುನ್ಮಾನ ತಕ್ಕಡಿಗಳು ಹಾಗೂ ವಜ್ರವನ್ನು ಪರೀಕ್ಷಿಸಲು ಬಳಸುವ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ.

Similar News