ಮೋಹನ್ ಭಾಗವತ್ ಹೇಳಿಕೆಗಳ ಬಗ್ಗೆ ವಾಗ್ವಾದ: ವಿಎಚ್‌ಪಿ ನಾಯಕನಿಗೆ ಗುಂಡೇಟು

Update: 2023-02-13 16:20 GMT

ಲಕ್ನೋ, ಫೆ. 13: ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಶನಿವಾರ ವಾಗ್ವಾದವೊಂದರ ಬಳಿಕ ಬಿಜೆಪಿ ಸದಸ್ಯನೆನ್ನಲಾದ ವ್ಯಕ್ತಿಯೊಬ್ಬನು ವಿಶ್ವ ಹಿಂದೂ ಪರಿಷದ್ (ವಿಎಚ್‌ಪಿ) ನಾಯಕನಿಗೆ ಗುಂಡು ಹಾರಿಸಿದ್ದಾನೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಫೆಬ್ರವರಿ 8ರಂದು ನಡೆದ ಪ್ರತಿಭಟನೆಯಲ್ಲಿ ಆರೋಪಿ ರಜತ್ ಶರ್ಮ ಪಾಲ್ಗೊಂಡಿದ್ದನು. ಪ್ರತಿಭಟನೆಯಲ್ಲಿ ಆತ ಭಾಗವತ್ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದನು ಎನ್ನಲಾಗಿದೆ.

‘‘ಪಕ್ಷದ ನಾಯಕತ್ವದ ವಿರುದ್ಧ ಹೋಗಿರುವುದಕ್ಕಾಗಿ’’ ಶರ್ಮನನ್ನು ಬಿಜೆಪಿಯಿಂದ ವಜಾಗೊಳಿಸಬೇಕು ಎಂಬುದಾಗಿ ವಿಶ್ವ ಹಿಂದೂ ಪರಿಷದ್ ನಾಯಕ ಸಂತೋಷ್ ಪಂಡಿತ್ ಒತ್ತಾಯಿಸಿದ್ದರು ಹಾಗೂ ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದಿದ್ದರು ಎನ್ನಲಾಗಿದೆ. ಶನಿವಾರ ಸಂಜೆ ಪಂಡಿತ್ ಮತ್ತು ಶರ್ಮ ವಾಗ್ವಾದಕ್ಕಿಳಿದರು ಹಾಗೂ ಒಂದು ಹಂತದಲ್ಲಿ ಶರ್ಮನು ಪಂಡಿತ್‌ಗೆ ಗುಂಡು ಹಾರಿಸಿದನು ಎನ್ನಲಾಗಿದೆ.

ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಎಂದ ಸಂಘಟನೆಯು ಭಾಗವತ್ ವಿರುದ್ಧ ಪ್ರತಿಭಟನೆ ಆಯೋಜಿಸಿತ್ತು. ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದ್ದು ಪಂಡಿತರು (ಬ್ರಾಹ್ಮಣ ಸಮುದಾಯವನ್ನು ಸಂಬೋಧಿಸುವ ಹೆಸರು) ಎಂಬುದಾಗಿ ಫೆಬ್ರವರಿ 5ರಂದು ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.

ಶಾಸ್ತ್ರಗಳ ಆಧಾರದಲ್ಲಿ ಪಂಡಿತರು ಹೇಳಿರುವುದು ಸುಳ್ಳು ಎಂಬುದಾಗಿಯೂ ತನ್ನ ಭಾಷಣದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಹೇಳಿದ್ದರು.

ಅವರ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿರುವಂತೆಯೇ, ಆರ್‌ಎಸ್‌ಎಸ್‌ನ ಪ್ರಚಾರ ಮುಖ್ಯಸ್ಥ ಸುನೀಲ್ ಅಂಬೇಕರ್ ಫೆಬ್ರವರಿ 6ರಂದು ಹೇಳಿಕೆಯೊಂದನ್ನು ನೀಡಿ, ‘‘ಭಾಗವತರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಪಂಡಿತರೆಂದು ಹೇಳಿದ್ದು ವಿದ್ವಾಂಸರನ್ನು’’ ಎಂದು ಹೇಳಿದ್ದರು.

Similar News