JPC ತನಿಖೆಗೆ ಪ್ರತಿಪಕ್ಷಗಳ ಆಗ್ರಹ: ರಾಜ್ಯಸಭೆ ಮಾರ್ಚ್ 13ರ ವರೆಗೆ ಮುಂದೂಡಿಕೆ
ಹೊಸದಿಲ್ಲಿ, ಫೆ. 13: ಅದಾನಿ ಸಮೂಹದ ಶೇರು ವಂಚನೆ ಆರೋಪದ ಕುರಿತಂತೆ ಜಂಟಿ ಸಂಸದೀಯ ಸಮಿತಿ (JPC) ಯಿಂದ ತನಿಖೆ ನಡೆಸುವಂತೆ ಪ್ರತಿಪಕ್ಷದ ಸಂಸದರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸೋಮವಾರ ಕೂಡ ರಾಜ್ಯ ಸಭೆಯ ಬಜೆಟ್ ಅಧಿವೇಶನದ ಮೊದಲ ಹಂತವನ್ನು ಮಾರ್ಚ್ 13ಕ್ಕೆ ಮುಂದೂಡಲಾಯಿತು.
ಸದನವನ್ನು ಮೊದಲ ಬಾರಿಗೆ ಮುಂದೂಡುವ ಮುನ್ನ ಉಪ ರಾಷ್ಟ್ರಪತಿ ಹಾಗೂ ರಾಜ್ಯ ಸಭೆಯ ಅಧ್ಯಕ್ಷ ಜಗದೀಪ್ ಧನಕರ್ ಅವರು ಹಲವು ಸಂಸದರ ಹೆಸರು ಉಲ್ಲೇಖಿಸಿದರು ಹಾಗೂ ಕಲಾಪಕ್ಕೆ ಅಡ್ಡಿ ಉಂಟು ಮಾಡುವ ಚಟುವಟಿಕೆಯಲ್ಲಿ ತೊಡಗಬೇಡಿ ಎಂದು ಎಚ್ಚರಿಕೆ ನೀಡಿದರು. ಧನಕರ್ ಅವರು ಉಲ್ಲೇಖಿಸಿದ ಸಂಸದರಲ್ಲಿ ರಾಘವ ಚಡ್ಡಾ, ಇಮ್ರಾನ್ ಪ್ರತಾಪ್‌ಗರಿ, ಶಕ್ತಿ ಸಿನ್ಹಾ ಗೋಹಿಲ್, ಕುಮಾರ್ ಕೇಟ್ಕರ್ ಹಾಗೂ ಸಂದೀಪ್ ಪತಾಕ್ ಮೊದಲಾದವರು ಸೇರಿದ್ದರು.
ಕಲಾಪ ಆರಂಭವಾದ ಬಳಿಕ ಜಂಟಿ ಸಂಸದೀಯ ಸಮಿತಿಯ ತನಿಖೆ ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಪ್ರತಿಪಕ್ಷಗಳ ಸಂಸದರು ನೀಡಿದ ನೋಟಿಸ್‌ನ ಕುರಿತು ಕ್ರಮ ತೆಗೆದುಕೊಳ್ಳಲು ಅಧ್ಯಕ್ಷರು ನಿರಾಕರಿಸಿದರು. ಅನಂತರ ಸಂಸದರು ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲು ಅವಕಾಶ ನೀಡುವಂತೆ ಧನಕರ್ ಅವರನ್ನು ಆಗ್ರಹಿಸಿದರು.
ಧನಕರ್ ಅವರು ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ, ಆಡಳಿತರೂಡ ಪಕ್ಷದ ಹಲವು ಸದಸ್ಯರು ಘೋಷಣೆಗಳನ್ನು ಕೂಗಿದರು. ಖರ್ಗೆ ಅವರು ನೀಡಿದ ಹೇಳಿಕೆಯನ್ನು ಅನಂತರ ಅಧ್ಯಕ್ಷರು ಕಡತದಿಂದ ತೆಗೆದು ಹಾಕಿದರು. ಈ ನಡುವೆ ಧನಕರ್ ಅವರು ಶಿಷ್ಟಾಚಾರವನ್ನು ಅನುಸರಿಸುವಂತೆ ಹಾಗೂ ಪ್ರಶ್ನೋತ್ತರ ವೇಳೆ ಮುಂದುವರಿಯಲು ಅವಕಾಶ ನೀಡುವಂತೆ ಪ್ರತಿಪಕ್ಷವನ್ನು ಕೋರಿದರು.
ಸದನವನ್ನು ಮುಂದಿನ ತಿಂಗಳು ಮುಂದೂಡುವ ಮುನ್ನ ಧನಕರ್ ಅವರು, ‘‘ ಸದಸ್ಯರೇ, ನಾನು ನಿಮ್ಮಲ್ಲಿ ಕೊನೆಯ ಬಾರಿ ಮನವಿ ಮಾಡುತ್ತಿದ್ದೇನೆ. ಸದನಕ್ಕೆ ಇಂತಹ ಅಡ್ಡಿ, ಗೊಂದಲ ಉಂಟಾದರೆ, ನಿಯಮಗಳ ಉಲ್ಲಂಘನೆಯಾದರೆ, ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ನಿರ್ಬಂಧ ಹೇರಲಾಗುವುದು’’ ಎಂದರು.
ಅದಾನಿ ಸಮೂಹದ ವಿರುದ್ಧದ ಆರೋಪದ ಕುರಿತು ತನಿಖೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಸಂಸತ್ತಿನ ಬಜೆಟ್ ಅಧಿವೇಶನ ಹಲವು ಬಾರಿ ಮುಂದೂಡಿಕೆಗೆ ಸಾಕ್ಷಿಯಾಗುತ್ತಿದೆ.
ಇದನ್ನು ಓದಿ: ಕರ್ನಾಟಕದಲ್ಲಿ ಕೋಮು ಸಮಸ್ಯೆಗಳಿವೆ, ಕೇರಳ ಸೌಹಾರ್ದತೆಯಿಂದ ಜೀವಿಸುತ್ತಿದೆ: ಶಾ ಹೇಳಿಕೆಗೆ ಪಿಣರಾಯಿ ತಿರುಗೇಟು