ಮೀಸಲಾತಿಗೆ ಬೇಡಿಕೆ:‌ ಭೋಪಾಲದಲ್ಲಿ ಭೀಮ್ ಆರ್ಮಿಯ ಬಲಪ್ರದರ್ಶನದಲ್ಲಿ ಆದಿವಾಸಿಗಳು, ಒಬಿಸಿಗಳು ಭಾಗಿ

Update: 2023-02-13 16:32 GMT

ಭೋಪಾಲ,ಫೆ.13: ದಲಿತ ಸಂಘಟನೆ ಭೀಮ್ ಆರ್ಮಿಯು ರವಿವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ಜಾತಿಯಾಧಾರಿತ ಮೀಸಲಾತಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು ಬೃಹತ್ ಬಲ ಪ್ರದರ್ಶನ ನಡೆಸಿದ್ದು,ಇದರಿಂದ ರಾಜ್ಯದಲ್ಲಿಯ ಆಡಳಿತ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಲೆ ಕೆಡಿಸಿಕೊಳ್ಳುವಂತಾಗಿದೆ.

ಜಾತಿಯಾಧಾರಿತ ಜನಗಣತಿ,ಬಡ್ತಿಯಲ್ಲಿ ಮೀಸಲಾತಿಗಾಗಿ ಕಾನೂನು,ಸಂವಿಧಾನದ ಒಂಭತ್ತನೇ ಅನುಸೂಚಿಯಲ್ಲಿ ಹೆಚ್ಚಿನ ಮೀಸಲಾತಿಯ ಸೇರ್ಪಡೆ ಹಾಗೂ ದಲಿತರು,ಆದಿವಾಸಿಗಳು, ಒಬಿಸಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳಿಗೆ ತಡೆ ಸೇರಿದಂತೆ 15 ಅಂಶಗಳ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಬುಡಕಟ್ಟು ಸಂಘಟನೆ ಜಯ್ ಆದಿವಾಸಿ ಯುವ ಸಂಘಟನೆ ಮತ್ತು ಒಬಿಸಿ ಮಹಾಸಭಾ ಬೆಂಬಲಿಸಿದ್ದವು.

ರಾಜ್ಯದಲ್ಲಿ ಪಕ್ಷವೊಂದನ್ನು ಅಧಿಕಾರಕ್ಕೆ ತರುವಲ್ಲಿ ನಿರ್ಣಾಯಕ ಪಾತ್ರವನ್ನು ಹೊಂದಿರುವ ಆದಿವಾಸಿ ಮತ್ತು ದಲಿತ ಮತದಾರರನ್ನು ಓಲೈಸಲು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದು,ಉಭಯ ಪಕ್ಷಗಳು ಹಲವಾರು ಭರವಸೆಗಳನ್ನು ನೀಡಿವೆ. ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಕಟಿಸಿರುವ ಆಡಳಿತಾರೂಢ ಬಿಜೆಪಿಯು ಉಭಯ ಸಮುದಾಯಗಳ ಸ್ಥಳೀಯ ಹಿರೋಗಳು ಮತ್ತು ಆದರ್ಶ ವ್ಯಕ್ತಿಗಳನ್ನು ಗೌರವಿಸುವುದನ್ನು ಆರಂಭಿಸಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿಯ ಸಾಂಪ್ರದಾಯಿಕ ಮತದಾರರೆಂದು ಪರಿಗಣಿಸಲಾಗಿರುವ ಒಬಿಸಿಗಳು ವಿಶೇಷವಾಗಿ ಜಾತಿಯಾಧಾರಿತ ಮೀಸಲಾತಿ ವಿಷಯ ಕುರಿತು ಇದೇ ಮೊದಲ ಬಾರಿಗೆ ಪ್ರತ್ಯೇಕ ಸಾಮಾಜಿಕ-ರಾಜಕೀಯ ಶಕ್ತಿಯಾಗಿ ಬೆಳೆಯತೊಡಗಿದ್ದಾರೆ ಮತ್ತು ಒಬಿಸಿ ಮಹಾಸಭಾ ತನ್ನ ಸ್ವಂತ ಬಲದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಮಾತುಗಳನ್ನಾಡುತ್ತಿದೆ. ಆದಿವಾಸಿಗಳು,ದಲಿತರು ಮತ್ತು ಒಬಿಸಿಗಳನ್ನು ಪ್ರತಿನಿಧಿಸುವ ಸಂಘಟನೆಗಳ ಒಗ್ಗೂಡುವಿಕೆಯು ರಾಜ್ಯದಲ್ಲಿ ಮತದಾನ ಮಾದರಿಯ ಮೇಲೆ ಬೃಹತ್ ಪರಿಣಾಮವನ್ನು ಬೀರಬಹುದು ಮತ್ತು ರಾಜಕೀಯ ಪಕ್ಷಗಳು ಈ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುವುದು ರಾಜಕೀಯ ವೀಕ್ಷಕರ ಅಭಿಪ್ರಾಯವಾಗಿದೆ.

ಮೂಲಗಳು ತಿಳಿಸಿರುವಂತೆ ರವಿವಾರ ಭೋಪಾಲದ ಬಿಎಚ್‌ಇಎಲ್ ದಸರಾ ಮೈದಾನದಲ್ಲಿ ಭೀಮ್ ಆರ್ಮಿಯ ರಾಜಕೀಯ ಸಂಘಟನೆ ಆಝಾದ್ ಸಮಾಜ ಪಾರ್ಟಿ ಮತ್ತು ಭೀಮ್ ಆರ್ಮಿ ಭಾರತ ಏಕತಾ ಮಿಷನ್ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನರು ಪಾಲ್ಗೊಂಡಿದ್ದರು. ಆದರೆ ಸಮಾವೇಶದಲ್ಲಿ ಐದು ಲಕ್ಷ ಜನರು ಭಾಗಿಯಾಗಿದ್ದರು ಎಂದು ಆಝಾದ್ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಸುನಿಲ ಅಸ್ತೇಯ ಹೇಳಿದ್ದಾರೆ. ಸಮಾವೇಶದೊಂದಿಗೆ ಆಝಾದ್ ಸಮಾಜ ಪಾರ್ಟಿಯ ‘ನ್ಯಾಯ ಯಾತ್ರೆ ’ಯು ಸಂಪನ್ನಗೊಂಡಿತು.

ಈ ವರ್ಷ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಇಂತಹ ಕನಿಷ್ಠ ಐದು ರ್ಯಾಲಿಗಳು ನಡೆಯಲಿವೆ ಮತ್ತು ಪ್ರತಿಯೊಂದು ರ್ಯಾಲಿಯಲ್ಲಿಯೂ ದುಪ್ಪಟ್ಟು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದ ಭೀಮ್ ಆರ್ಮಿಯ ಮುಖ್ಯಸ್ಥ ಹಾಗೂ ಆಝಾದ್ ಸಮಾಜ ಪಾರ್ಟಿಯ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಆಝಾದ್ ಅವರು,ಬೇಡಿಕೆಗಳ ಈಡೇರಿಕೆಗಾಗಿ ಒಂದು ತಿಂಗಳು ಗಡುವು ನೀಡಿದ್ದಾರೆ.

Similar News