ಮಧ್ಯಪ್ರದೇಶ: ಚರ್ಚ್‌ಗೆ ಬೆಂಕಿ; ಗೋಡೆಯಲ್ಲಿ 'ರಾಮನಾಮ'

Update: 2023-02-13 17:06 GMT

ಭೋಪಾಲ (ಮಧ್ಯಪ್ರದೇಶ): ಮಧ್ಯಪ್ರದೇಶದ ನರ್ಮದಾಪುರಮ್ ಜಿಲ್ಲೆಯ ಗ್ರಾಮವೊಂದರ ಚರ್ಚ್‌ಗೆ ದುಷ್ಕರ್ಮಿಗಳ ಗುಂಪೊಂದು ಬೆಂಕಿ ಹಚ್ಚಿದ್ದಾರೆಂದು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಬುಡಕಟ್ಟು ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸುಖ್ತಾವ ಬ್ಲಾಕ್‌ನ ಚೌಕಿಪುರ ಗ್ರಾಮದಲ್ಲಿರುವ ಚರ್ಚ್ ಒಳಗಿನ ಪೀಠೋಪಕರಣಗಳು ಸುಟ್ಟು ಹೋಗಿವೆ. ಗೋಡೆಗಳು ಬೆಂಕಿಯ ಜ್ವಾಲೆಯಿಂದಾಗಿ ಕಪ್ಪಾಗಿವೆ ಮತ್ತು ಪ್ರಾರ್ಥನಾ ಕೊಠಡಿಯ ಒಳಗಿನ ಗೋಡೆಯ ಮೇಲೆ ‘‘ರಾಮ’’ ಎಂಬುದಾಗಿ ಬರೆಯಲಾಗಿದೆ ಎಂದು ಸ್ಥಳೀಯರು ಹೇಳಿದ್ದಾಗಿ scroll.in ವರದಿ ಮಾಡಿದೆ.

ಭಾರತೀಯ ದಂಡ ಸಂಹಿತೆ (IPC)ಯ 295ನೇ ಪರಿಚ್ಛೇದ (ಒಂದು ವರ್ಗದ ಜನರ ಧರ್ಮವನ್ನು ಅವಮಾನಿಸುವ ಉದ್ದೆಶದಿಂದ ಆರಾಧಾನಾ ಸ್ಥಳವನ್ನು ಧ್ವಂಸಗೈಯುವುದು ಅಥವಾ ಅಪವಿತ್ರಗೊಳಿಸುವುದು) ದಡಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರದಲ್ಲಿರುವ ಸ್ಥಳದಲ್ಲಿ ಐದು ವರ್ಷಗಳ ಹಿಂದೆ ಕಟ್ಟಲಾಗಿರುವ ಪ್ರಾರ್ಥನಾ ಸ್ಥಳಕ್ಕೆ ದುಷ್ಕರ್ಮಿಗಳು ನುಗ್ಗಿ ಕಟ್ಟಡಕ್ಕೆ ಬೆಂಕಿ ಕೊಟ್ಟರು ಎಂದು ನರ್ಮದಾಪುರಂ ಪೊಲೀಸ್ ಸೂಪರಿಂಟೆಂಡೆಂಟ್ ಗುರುಕರಣ್ ಸಿಂಗ್ ಹೇಳಿದರು. ಬೆಂಕಿಯಲ್ಲಿ ಕೆಲವು ಧಾರ್ಮಿಕ ಪುಸ್ತಕಗಳು, ಪೀಠೋಪಕರಣಗಳು ಮತ್ತು ಇತರ ವಸ್ತುಗಳು ನಾಶವಾಗಿವೆ ಎಂದು ಅವರು ಹೇಳಿದರು.

ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಬಲವಂತದಿಂದ ಹನುಮಾನ್ ವಿಗ್ರಹ ಸ್ಥಾಪನೆ!

ಕೋಮು ಉದ್ವಿಗ್ನತೆಗೆ ಹಾದಿಮಾಡಿಕೊಡುವ ಇನ್ನೊಂದು ಘಟನೆಯಲ್ಲಿ, ಮಧ್ಯಪ್ರದೇಶದ ಖಾಂಡ್ವ ನಗರದಲ್ಲಿರುವ ಮುಸ್ಲಿಮ್ ವ್ಯಕ್ತಿಯೊಬ್ಬರ ಮನೆಯಲ್ಲಿ ಹನುಮಾನ್ ವಿಗ್ರಹವೊಂದನ್ನು ಬಲವಂತವಾಗಿ ಪ್ರತಿಷ್ಠಾಪಿಸಲಾಗಿದೆ ಎಂದು scroll.in ವರದಿ ಮಾಡಿದೆ. ಘಟನೆಯ ಬಳಿಕ ಮುಖಾಮುಖಿಯಾದ ಉಭಯ ಸಮುದಾಯಗಳ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಆಗ ಕಲ್ಲುತೂರಾಟ ನಡೆದು ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮನೆಯೊಳಗೆ ಅಕ್ರಮ ಪ್ರವೇಶ, ಕೊಲೆಯತ್ನ ಮತ್ತು ಗಲಭೆಗೆ ಸಂಬಂಧಿಸಿದ ಐಪಿಸಿಯ ವಿವಿಧ ಪರಿಚ್ಛೇದಗಳ ಅಡಿಯಲ್ಲಿ ಮೂರು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಈವರೆಗೆ ಐವರನ್ನು ಬಂಧಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

Similar News