×
Ad

ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆಗೆ ಜಾತಿ ತಾರತಮ್ಯ ಕಾರಣ: ಆರೋಪ

Update: 2023-02-13 23:01 IST

ಹೊಸದಿಲ್ಲಿ, ಫೆ. 13:  ಐಐಟಿ ಬಾಂಬೆಯ ಪೊವೈ ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್ ಕಟ್ಟಡದ 7ನೇ ಮಹಡಿಯಿಂದ ಸಂಸ್ಥೆಯ 18 ವರ್ಷದ ದಲಿತ ವಿದ್ಯಾರ್ಥಿಯೋರ್ವ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ.  ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ಕುರಿತ ತಾರತಮ್ಯ ಈ ಆತ್ಮಹತ್ಯೆಗೆ ಕಾರಣ ಎಂದು ವಿದ್ಯಾರ್ಥಿಗಳ ಗುಂಪೊಂದು ಆರೋಪಿಸಿದೆ. 

ಆತ್ಮಹತ್ಯೆ ಮಾಡಿಕೊಂಡ ದಲಿತ ವಿದ್ಯಾರ್ಥಿಯನ್ನು ಅಹ್ಮದಾಬಾದ್ ಮೂಲದ ದರ್ಶನ್ ಸೋಲಂಕಿ ಎಂದು ಗುರುತಿಸಲಾಗಿದೆ. ಈತ ಬಿಟೆಕ್ ವಿದ್ಯಾರ್ಥಿ. ಮೂರು ತಿಂಗಳ ಹಿಂದೆ ಈತ ಕೋರ್ಸ್‌ಗೆ ಸೇರಿದ್ದ. ಈತನ ಮೊದಲ ಸೆಮಿಸ್ಟರ್ ಪರೀಕ್ಷೆ  ಶನಿವಾರ ಮುಗಿದಿತ್ತು.  

ಮೃತದೇಹದ ಜೊತೆ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ. 

ಈ ಕುರಿತಂತೆ ಐಐಟಿ ಬಾಂಬೆಯ ಅಂಬೇಡ್ಕರ್ ಪೆರಿಯಾರ್ ಪುಲೆ ಸ್ಟಡಿ ಸರ್ಕಲ್ (ಎಪಿಪಿಎಸ್‌ಸಿ) ಟ್ವೀಟ್ ಮಾಡಿ, ‘‘ಐಐಟಿ ಬಾಂಬೆಯಲ್ಲಿ ಬಿಟೆಕ್ ಕೋರ್ಸ್‌ಗೆ ಮೂರು ತಿಂಗಳ ಹಿಂದೆ  ಸೇರಿದ್ದ 18 ವರ್ಷದ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಸಾವಿಗೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ. ಇದು ವೈಯುಕ್ತಿಕ ವಿಷಯವಲ್ಲ, ಬದಲಾಗಿ ಇದು ಸಾಂಸ್ಥಿಕ ಕೊಲೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು’’ ಎಂದು ಹೇಳಿದೆ. 

‘‘ನಮ್ಮ ದೂರಿನ ಹೊರತಾಗಿಯೂ ಸಂಸ್ಥೆ ದಲಿತ ಬಹುಜನ ಆದಿವಾಸಿ ವಿದ್ಯಾರ್ಥಿಗಳಿಗೆ ಒಳಗೊಳ್ಳುವ ಅವಕಾಶವನ್ನು ರೂಪಿಸಲು ಹಾಗೂ ರಕ್ಷಣೆ ನೀಡಲು  ಕ್ರಮ ಕೈಗೊಂಡಿಲ್ಲ. ಪ್ರಥಮ ವರ್ಷದ ವಿದ್ಯಾರ್ಥಿಗಳು ಮೀಸಲಾತಿ ವಿರೋಧಿಗಳಿಂದ ಕಿರುಕುಳ ಎದುರಿಸುತ್ತಿದ್ದಾರೆ. ಅಲ್ಲದೆ, ಅರ್ಹರಲ್ಲದವರು ಎಂಬ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಇದರೊಂದಿಗೆ ತಳ ಸಮುದಾಯಕ್ಕೆ ಸೇರಿದ ಬೋಧಕ ಹಾಗೂ ಸಮಾಲೋಚಕರ ಪ್ರಾತಿನಿಧ್ಯದ ಕೊರತೆ ಇದೆ ’’ ಎಂದು ಅದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದೆ. 

‘‘ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು, ಬೋಧಕರು, ಉದ್ಯೋಗಿಗಳಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಸಮಾನತೆ ಹಾಗೂ ಕಿರುಕುಳವನ್ನು ಎದುರಿಸುತ್ತಿರುವುದು ರಹಸ್ಯ ವಿಚಾರವಲ್ಲ’’ ಎಂದು ಅಂಬೇಡ್ಕರ್ ಪೆರಿಯಾರ್ ಫುಲೆ ಸರ್ಕಲ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆರೋಪಿಸಿದೆ. 
--------------------------------------------

Similar News