×
Ad

ಟೀಕಿಸುವ ಮಾಧ್ಯಮಗಳನ್ನು ಬೆದರಿಸುವ ತಂತ್ರದ ಭಾಗ: ಬಿಬಿಸಿ ಮೇಲಿನ ಐಟಿ ದಾಳಿಗೆ ಎಡಿಟರ್ಸ್‌ ಗಿಲ್ಡ್‌ ಕಳವಳ

Update: 2023-02-14 17:40 IST

ಹೊಸದಿಲ್ಲಿ: ಬಿಬಿಸಿ ಇಂಡಿಯಾದ ಕಛೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಕಳವಳಕಾರಿ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ಈ ದಾಳಿಯು, ಸರ್ಕಾರವನ್ನು ಟೀಕಿಸುವ ಮಾಧ್ಯಮಗಳನ್ನು ʼಬೆದರಿಸಲು ಮತ್ತು ಕಿರುಕುಳʼ ನೀಡಲು ಸರ್ಕಾರಿ ಏಜೆನ್ಸಿಗಳನ್ನು ಬಳಸಿಕೊಳ್ಳುವ ʼಪ್ರವೃತ್ತಿʼಯ ಮುಂದುವರಿದ ಭಾಗವಾಗಿದೆ ಎಂದು ಅದು ಹೇಳಿದೆ.

ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಹಕ್ಕುಗಳನ್ನು ದುರ್ಬಲಗೊಳಿಸದಂತೆ ಇಂತಹ ಎಲ್ಲಾ ತನಿಖೆಗಳಲ್ಲಿ ಹೆಚ್ಚಿನ ಕಾಳಜಿ ಮತ್ತು ಸೂಕ್ಷ್ಮತೆಯನ್ನು ತೋರಿಸಬೇಕೆಂದು ಗಿಲ್ಡ್ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ.

ತೆರಿಗೆ ವಂಚನೆ ಆರೋಪದ ತನಿಖೆಯ ಭಾಗವಾಗಿ ಆದಾಯ ತೆರಿಗೆ ಅಧಿಕಾರಿಗಳು ದಿಲ್ಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಸಮೀಕ್ಷೆ ಕಾರ್ಯಾಚರಣೆ ನಡೆಸಿದ ನಂತರ ಈ ಹೇಳಿಕೆ ಹೊರಬಿದ್ದಿದೆ.

"ಐಟಿ ಇಲಾಖೆಯ ಸಮೀಕ್ಷೆಯು ಸರ್ಕಾರಿ ನೀತಿಗಳು ಅಥವಾ ಆಡಳಿತ ಸ್ಥಾಪನೆಯನ್ನು ಟೀಕಿಸುವ ಪತ್ರಿಕಾ ಸಂಸ್ಥೆಗಳನ್ನು ಬೆದರಿಸುವ ಮತ್ತು ಕಿರುಕುಳ ನೀಡಲು ಸರ್ಕಾರಿ ಏಜೆನ್ಸಿಗಳನ್ನು ಬಳಸುವ ಪ್ರವೃತ್ತಿಯ ಮುಂದುವರಿಕೆಯಾಗಿದೆ" ಎಂದು ಗಿಲ್ಡ್ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.

ಗುಜರಾತಿನಲ್ಲಿ 2002 ರ ಹಿಂಸಾಚಾರ ಮತ್ತು ಭಾರತದಲ್ಲಿನ ಅಲ್ಪಸಂಖ್ಯಾತರ ಪ್ರಸ್ತುತ ಸ್ಥಿತಿಯ ಕುರಿತು ಬಿಬಿಸಿ ಎರಡು ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದ ನಂತರ ಬಿಬಿಸಿ ಕಛೇರಿಗಳ ಮೇಲೆ ಐಟಿ ದಾಳಿ ನಡೆದಿದೆ.

 ಈ ಹಿಂದೆ, ನ್ಯೂಸ್‌ಕ್ಲಿಕ್, ನ್ಯೂಸ್‌ಲಾಂಡ್ರಿ, ದೈನಿಕ್ ಭಾಸ್ಕರ್ ಮತ್ತು ಭಾರತ್ ಸಮಾಚಾರ್ ಕಚೇರಿಗಳಲ್ಲಿ 2021 ರಲ್ಲಿ ಐಟಿ ದಾಳಿಗಳನ್ನು ನಡೆಸಲಾಗಿದೆ ಎಂದು ಎಡಿಟರ್ಸ್‌ ಗಿಲ್ಡ್ ನೆನಪಿಸಿಕೊಂಡಿದೆ.

"ಪ್ರತಿಯೊಂದು ಪ್ರಕರಣದಲ್ಲಿ, ಸುದ್ದಿ ಸಂಸ್ಥೆಗಳು ಸರ್ಕಾರಿ ಸ್ಥಾಪನೆಯ ವಿಮರ್ಶಿಸಿದ ಬೆನ್ನಲ್ಲೇ ಐಟಿ ದಾಳಿಗಳು ನಡೆದಿದೆ. ಇದು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರವೃತ್ತಿ" ಎಂದು ಗಿಲ್ಡ್ ಹೇಳಿದೆ.

Similar News