×
Ad

ಮುಸ್ಲಿಮ್ ಎಂಬ ಕಾರಣಕ್ಕೆ ನನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು: ಪತ್ರಕರ್ತ ಸಿದ್ದೀಕ್ ಕಪ್ಪನ್

Update: 2023-02-14 18:14 IST

ಹೊಸದಿಲ್ಲಿ: 28 ತಿಂಗಳುಗಳ ಜೈಲುವಾಸದ ಬಳಿಕ ಕೊನೆಗೂ ಹೊರಬಂದಿರುವ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರು, ತಾನು ಮುಸ್ಲಿಮ್ ಎಂಬ ಏಕೈಕ ಕಾರಣಕ್ಕೆ ತನ್ನನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಸುದ್ದಿ ಜಾಲತಾಣ thewire.inಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜಾಮೀನಿನಲ್ಲಿ  ಹೊರಗಿರುವ ಪತ್ರಕರ್ತ ಕಪ್ಪನ್ ಜೈಲಿನಲ್ಲಿ ತಾನು ಪಟ್ಟ ಕಷ್ಟಗಳನ್ನು ವಿವರಿಸಿದ್ದಾರೆ. ಜೈಲಿನಲ್ಲಿದ್ದಾಗ ಎರಡು ಸಲ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದರು.

ಜೈಲು ಆಸ್ಪತ್ರೆಯಲ್ಲಿನ ತನ್ನ ಅನುಭವವನ್ನು ಮೆಲುಕು ಹಾಕಿದ ಕಪ್ಪನ್, "ನನ್ನನ್ನು ‘ಭಯೋತ್ಪಾದಕ ’ಎಂದು ಕರೆಯಲಾಗಿತ್ತು ಮತ್ತು ನನ್ನನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳುವುದಾಗಿ ಅಲ್ಲಿಯ ಅಧಿಕಾರಿಯೋರ್ವರು ಹೇಳಿದ್ದರು" ಎಂದು ತಿಳಿಸಿದರು.

ಆಸ್ಪತ್ರೆಯ ಮಂಚಕ್ಕೆ ತನ್ನ ಕೈಗಳನ್ನು ಬೇಡಿಯಿಂದ ಬಿಗಿಯಲಾಗಿತ್ತು ಮತ್ತು ಸತತ ಐದು ದಿನಗಳ ಕಾಲ ಟಾಯ್ಲೆಟ್ ಬಳಸಲು ತನಗೆ ಅವಕಾಶ ನೀಡಿರಲಿಲ್ಲ, ಹೀಗಾಗಿ ಬಾಟಲಿಯಲ್ಲಿ ವಿಸರ್ಜನೆ ಮಾಡುವುದು ತನಗೆ ಅನಿವಾರ್ಯವಾಗಿತ್ತು. ಆಗ ತನ್ನ ವಕೀಲರು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದರು ಎಂದು ಕಪ್ಪನ್ ಹೇಳಿದರು.

ಬಿಜೆಪಿ ಸರಕಾರದಡಿ ಮಾಧ್ಯಮಗಳ ಸೆನ್ಸಾರ್‌ಶಿಪ್ ವಿರುದ್ಧ ಧ್ವನಿಯೆತ್ತಿದ್ದೆ ಎಂಬ ಕಾರಣಕ್ಕೆ ತನ್ನನ್ನು ಗುರಿಯಾಗಿಸಲಾಗಿತ್ತು. ಹಿಂದುತ್ವ ರಾಜಕೀಯವನ್ನು ಬೆಂಬಲಿಸುವ ಸುದ್ದಿ ಪೋರ್ಟಲ್‌ಗಳು ತನ್ನನ್ನು ದಿಲ್ಲಿ ದಂಗೆಗಳ ರೂವಾರಿ ಎಂದು ಬಿಂಬಿಸಿದ್ದವು ಎಂದು ಕಪ್ಪನ್ ಆರೋಪಿಸಿದರು.

ಅವರ ಪ್ರಕಾರ, ಹಥರಾಸ್‌ನಲ್ಲಿ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇದು ಅತ್ಯಂತ ಸೂಕ್ತ ಎಂದು ಸರಕಾರ ಮತ್ತು ಹಿಂದುತ್ವ ಬ್ರಿಗೇಡ್ ಭಾವಿಸಿದ್ದವು. ಹಥರಾಸ್ ಪ್ರಕರಣವು ಬಿಜೆಪಿ ಮತ್ತು ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರದ ವಿರುದ್ಧ ತೀವ್ರ ಆಕ್ರೋಶವನ್ನು ಸೃಷ್ಟಿಸಿತ್ತು.

‘ನನ್ನನ್ನು ‘ಭಯೋತ್ಪಾದಕ ’ಎಂದು ದೂಷಿಸುವುದು ಅವರಿಗೆ ಸುಲಭವಾಗಿತ್ತು, ಏಕೆಂದರೆ ನಾನು ಸಿದ್ದೀಕ್ ಕಪ್ಪನ್, ಓರ್ವ ಮುಸ್ಲಿಮ್ ಆಗಿದ್ದೆ’ ಎಂದು ಕಪ್ಪನ್ ಹೇಳಿದರು.

ಜೈಲಿನಿಂದ ತಾನು ತನ್ನ ಕುಟುಂಬಕ್ಕೆ ಪತ್ರಗಳನ್ನು ಬರೆಯುತ್ತಿದ್ದನ್ನು ನೆನಪಿಸಿಕೊಂಡ ಅವರು, ‘ನನ್ನ ಮಕ್ಕಳ, ವಿಶೇಷವಾಗಿ ನನ್ನ 19ರ ಹರೆಯದ ಪುತ್ರನ ಬಗ್ಗೆ ನಾನು ಚಿಂತೆಗೀಡಾಗಿದ್ದೆ. ನನ್ನ ಮಗನನ್ನು ‘ಭಯೋತ್ಪಾದಕನ ಪುತ್ರ ’ಎಂದು ಕರೆಯುತ್ತಾರೆ ಎಂಬ ಚಿಂತೆ ನನ್ನನ್ನು ಕಾಡುತ್ತಿತ್ತು. ನನ್ನ ಮಕ್ಕಳ ವ್ಯಕ್ತಿತ್ವ ಈ ರೀತಿಯಲ್ಲಿ ಕಳಂಕಿತಗೊಳ್ಳುವುದನ್ನು ನಾನು ಬಯಸುವುದಿಲ್ಲ’ ಎಂದರು.

ಜೈಲಿನಲ್ಲಿ ಇಂತಹ ಅಗ್ನಿಪರೀಕ್ಷೆಯನ್ನು ಎದುರಿಸಿದ್ದರೂ ಪತ್ರಿಕೋದ್ಯಮವನ್ನು ಮುಂದುವರಿಸುತ್ತೀರಾ ಎಂಬ ಪ್ರಶ್ನೆಗೆ,ಕಿರುಕುಳ ಎದುರಿಸಬೇಕಾಗಿ ಬಂದರೂ ತಾನು ಪತ್ರಿಕೋದ್ಯಮವನ್ನು ತೊರೆಯುವುದಿಲ್ಲ ಎಂದು ಉತ್ತರಿಸಿದರು.

ಆದರೂ ದಿಲ್ಲಿಯಲ್ಲಿನ ಹಿಂದಿ ಪತ್ರಕರ್ತರ ವರ್ಗವೊಂದು ತನ್ನನ್ನು ‘ತಥಾಕಥಿತ ಪತ್ರಕರ್ತ’ ಎಂದು ಬಣ್ಣಿಸಿದ್ದಕ್ಕೆ ವ್ಯಥೆಯನ್ನು ವ್ಯಕ್ತಪಡಿಸಿದ ಕಪ್ಪನ್, ಓರ್ವ ಪತ್ರಕರ್ತನಾಗಿ ತನ್ನ ಸುದೀರ್ಘ ವೃತ್ತಿಜೀವನದಲ್ಲಿ ಹಿಂದೆಂದೂ ಇಂತಹ ಅವಮಾನಕ್ಕೊಳಗಾಗಿರಲಿಲ್ಲ ಎಂದರು.

2020, ಅಕ್ಟೋಬರ್‌ನಲ್ಲಿ, ಮೇಲ್ಜಾತಿಯ ನಾಲ್ವರು ದುಷ್ಕರ್ಮಿಗಳಿಂದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ವರದಿ ಮಾಡಲು ದಿಲ್ಲಿಯಿಂದ ಹಥರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಮಥುರಾ ಸಮೀಪ ಕಪ್ಪನ್‌ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ದೇಶದ್ರೋಹ ಸೇರಿದಂತೆ ಐಪಿಸಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಮ್‌ಗಳಡಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.

ಇದನ್ನು ಓದಿ: ಟೀಕಿಸುವ ಮಾಧ್ಯಮಗಳನ್ನು ಬೆದರಿಸುವ ತಂತ್ರದ ಭಾಗ: ಬಿಬಿಸಿ ಮೇಲಿನ ಐಟಿ ದಾಳಿಗೆ ಎಡಿಟರ್ಸ್‌ ಗಿಲ್ಡ್‌ ಕಳವಳ

Similar News