ಫಿಟ್ನೆಸ್ ಸಾಬೀತುಪಡಿಸಲು ಭಾರತ ಕ್ರಿಕೆಟಿಗರು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ: ಚೇತನ್ ಶರ್ಮಾ

ಸ್ಟಿಂಗ್ ಆಪರೇಶನ್‌ನಲ್ಲಿ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ ಬಿಸಿಸಿಐ ಮುಖ್ಯ ಆಯ್ಕೆಗಾರ

Update: 2023-02-14 17:49 GMT

ಹೊಸದಿಲ್ಲಿ: ದೇಶದ ಅಗ್ರ ಕ್ರಿಕೆಟಿಗರು ಆಡಲು ಸಂಪೂರ್ಣ ಫಿಟ್ ಆಗಿರದಿದ್ದರೂ ಅವರು ಆಡಲು ಸಾಧ್ಯವಾಗುವಂತೆ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಾರೆ ಎಂದು ಭಾರತದ ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ (Chetan Sharma) ಬಹಿರಂಗಪಡಿದ್ದಾರೆ ಎಂದು Zee News ವರದಿ ಮಾಡಿದೆ. 

ಆಟಗಾರರು ಪಂದ್ಯಕ್ಕೆ ಫಿಟ್ ಆಗಿರಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂದು ಭಾರತದ ಮಾಜಿ ವೇಗಿ ಹೇಳಿದ್ದಾರೆ.

"ಆಟಗಾರರು ಫಿಟ್ ಇಲ್ಲದಿದ್ದರೂ ಇಂಜೆಕ್ಷನ್ ತೆಗೆದುಕೊಂಡು ಆಡುತ್ತಾರೆ. ಶೇ.80ರಷ್ಟು ಫಿಟ್ನೆಸ್ ಇದ್ದರೂ ಆಡಲು ಸಿದ್ದರಿರುತ್ತಾರೆ. ಅವರು ಇಂಜೆಕ್ಷನ್ ಪಡೆದುಕೊಂಡು ಆಡಲು ಆರಂಭಿಸುತ್ತಾರೆ’’ ಎಂದು ಝೀ ನ್ಯೂಸ್ ನಡೆಸಿರುವ ವಿಶೇಷ ಕುಟುಕು ಕಾರ್ಯಾಚರಣೆಯಲ್ಲಿ ಶರ್ಮಾ ಹೇಳಿದ್ದಾರೆ.

ಇಂಜೆಕ್ಷನ್‌ಗಳು ನೋವು ನಿವಾರಕವೇ ಎಂದು ಕೇಳಿದಾಗ, ‘‘ಇದು ಇಂಜೆಕ್ಷನ್ ಅಷ್ಟೇ, ನೋವು ನಿವಾರಕವಲ್ಲ. ಅವರು ಇಂಜೆಕ್ಷನ್ ತೆಗೆದುಕೊಂಡಿದ್ದಾರೆಂದು ನಮಗೆ ಗೊತ್ತಿರುವುದಿಲ್ಲ. ನೋವು ನಿವಾರಕಕ್ಕೆ ಅವರಿಗೆ ವೈದ್ಯರ ಚೀಟಿ ಬೇಕು. ಅದು ಡೋಪಿಂಗ್ ಅಡಿಯೂ ಬರಬಹುದು’’ ಎಂದರು.

ಹಾಗಾದರೆ ಆಟಗಾರರೇ ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆಯೇ? ಎಂದು ಕೇಳಿದಾಗ, ಅಷ್ಟು ದೊಡ್ಡ ಸೂಪರ್‌ಸ್ಟಾರ್‌ಗಳಿಗೆ ವೈದ್ಯರು ಸಿಗುವುದಿಲ್ಲವೇ? ಸುತ್ತಲೂ ಸಾವಿರಾರು ವೈದ್ಯರು ಇರುತ್ತಾರೆ. ಒಂದು ಫೋನ್ ಕರೆ ಮಾಡಿದರೆ ಅವರ ಮನೆಗೆ ಬರುತ್ತಾರೆ ಎಂದಿರುವುದಾಗಿ ವರದಿಯಾಗಿದೆ.

Similar News