ಕಾಪು: ಡಿವೈಡರ್‌ಗೆ ಸ್ಕೂಟರ್ ಡಿಕ್ಕಿ; ಸಹಸವಾರೆ ಮೃತ್ಯು

Update: 2023-02-14 18:29 GMT

ಕಾಪು: ಮೂಡಬೆಟ್ಟು ಗ್ರಾಮದ ಬಾಲಾಜಿ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಹಿನ್ನೆಲೆಯಲ್ಲಿ ಇಡಲಾದ ಡಿವೈಡರ್‌ಗೆ ಢಿಕ್ಕಿ ಹೊಡೆದು ಫೆ.13ರಂದು ಸಂಜೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ರೋಶನಿ ಡಿಸೋಜ ಎಂದು ಗುರುತಿಸಲಾಗಿದೆ. ಬಂಟ್ವಾಳ ಸಿದ್ಧಕಟ್ಟೆ ನಿವಾಸಿ, ಸ್ಕೂಟರ್ ಸವಾರ ಜೋಯಲ್ ಡಿಕೋಸ್ತಾ(31) ಎಂಬವರು ಗಾಯಗೊಂಡು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಇವರು ಸ್ಕೂಟರ್‌ನಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಬಸ್ಸಿನ ಹಿಂಬದಿ ಸ್ಕೂಟರ್ ಹಿಂಬದಿ ಸವಾರೆ ರೋಶನಿ ಕಾಲಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಬಸ್ ಚಾಲಕನು ಬಸ್ ಅನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.

ಇದರಿಂದ ರೋಶನಿ ಕಾಲು ನೋವಿನಿಂದ ಅತ್ತಿತ್ತ ವಾಲುತ್ತಿದ್ದರು. ಇದರ ಪರಿಣಾಮ ನಿಯಂತ್ರಣ ತಪ್ಪಿದ ಸ್ಕೂಟರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಇಡಲಾದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆಯಿತು. ಬಳಿಕ ಇವರಿಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರೋಶನಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News