ದರ್ಶನ್ ಸೋಲಂಕಿ ಜಾತಿಯ ಕಾರಣಕ್ಕೆ ತನ್ನ ಸ್ನೇಹಿತರಿಂದ ಬಹಿಷ್ಕಾರಕ್ಕೊಳಗಾಗಿದ್ದ: ಕುಟುಂಬ ಸದಸ್ಯರ ಆರೋಪ

Update: 2023-02-15 08:33 GMT

 ಮುಂಬೈ: ಐಐಟಿ ಬಾಂಬೆಯಲ್ಲಿ 18 ವರ್ಷದ ದಲಿತ ವಿದ್ಯಾರ್ಥಿ ದರ್ಶನ್ ಸೋಲಂಕಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು  ತನ್ನ ಜಾತಿಯ ಕಾರಣದಿಂದ ತನ್ನ ಸ್ನೇಹಿತರಿಂದ ಬಹಿಷ್ಕಾರಕ್ಕೊಳಗಾಗಿದ್ದಾನೆ ಎಂದು  ತನ್ನ  ಸಹೋದರಿ ಹಾಗೂ  ಚಿಕ್ಕಮ್ಮನಿಗೆ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಯ ಕುಟುಂಬವು ಎನ್‌ಡಿಟಿವಿಗೆ ತಿಳಿಸಿದೆ.

 ಐಐಟಿ ಬಾಂಬೆಯ ಅಧಿಕಾರಿಗಳು ಕ್ಯಾಂಪಸ್‌ನಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದರೆ, ದರ್ಶನ್ ಸೋಲಂಕಿ ಕಿರುಕುಳವನ್ನು ಎದುರಿಸಿದ್ದಾರೆ ಎಂದು  ಅವರ ಕುಟುಂಬ ಹೇಳಿದೆ.

"ಕಳೆದ ತಿಂಗಳು ಆತ  ಮನೆಗೆ ಬಂದಾಗ, ನನ್ನಲ್ಲಿ ಹಾಗೂ  ಅಮ್ಮ-ಅಪ್ಪನ ಬಳಿ ಐಐಟಿ ಬಾಂಬೆ ಕ್ಯಾಂಪಸ್ ನಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಹೇಳಿದ್ದ. ದರ್ಶನ್  ಪರಿಶಿಷ್ಟ ಜಾತಿಗೆ ಸೇರಿದವನು  ಎಂದು ಅವರ ಸ್ನೇಹಿತರಿಗೆ ತಿಳಿದಿತ್ತು, ಆದ್ದರಿಂದ ಅವರ ವರ್ತನೆ ಬದಲಾಯಿತು. ಅವರು ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಆತನೊಂದಿಗೆ ಸುತ್ತಾಡುವುದನ್ನು ನಿಲ್ಲಿದ್ದರು’’ ಎಂದು ದರ್ಶನ್  ಸಹೋದರಿ ಜಾನ್ವಿ ಸೋಲಂಕಿ ಹೇಳಿದ್ದಾರೆ.

'ಅನೇಕ ವಿದ್ಯಾರ್ಥಿಗಳು ನನ್ನ ಮಗನ ಬಗ್ಗೆ ಅಸೂಯೆ ಹೊಂದಿದ್ದರು. ಆತನಿಗೆ ಚಿತ್ರಹಿಂಸೆ ನೀಡುತ್ತಿದ್ದರು. ಅದಕ್ಕಾಗಿಯೇ ಆತ ಈ ರೀತಿ ಮಾಡಿದ್ದಾನೆ’’ ಎಂದು ದರ್ಶನ್ ತಾಯಿ ತರ್ಲಿಕಾಬೆನ್ ಸೋಲಂಕಿ ಹೇಳಿದ್ದಾರೆ.

 "ಒಂದು ತಿಂಗಳ ಹಿಂದೆ ಆತ ಮನೆಗೆ ಬಂದಾಗ, ಅನೇಕ ವಿದ್ಯಾರ್ಥಿಗಳು ನಾನು ಉಚಿತವಾಗಿ ಓದುತ್ತಿದ್ದೇನೆ ಎಂದು ಹೇಳುತ್ತಿದ್ದರು, ಈ ಕಾರಣಕ್ಕೆ ಎಲ್ಲರೂ ಅಸೂಯೆ ಪಟ್ಟರು, ಅವರು "ನಾವು ಸಾಕಷ್ಟು ಖರ್ಚು ಮಾಡುತ್ತಿರುವಾಗ ನೀನು ಏಕೆ ಉಚಿತವಾಗಿ ಓದುತ್ತಿದ್ದೀಯಾ" ಎಂದು ಕೇಳುತ್ತಿದ್ದರು'' ಎಂದು ದರ್ಶನ್ ಅವರ ಚಿಕ್ಕಮ್ಮ ದಿವ್ಯಾಬೆನ್ ಹೇಳಿದ್ದಾರೆ.

ಮೊದಲನೇ ವರ್ಷದ ಬಿಟೆಕ್ ವಿದ್ಯಾರ್ಥಿಯ ದುರಂತ ಸಾವಿನ ಬಗ್ಗೆ ಕೆಲವು ಸುದ್ದಿಯಲ್ಲಿರುವ ಆರೋಪಗಳನ್ನು IIT ಬಾಂಬೆ ಬಲವಾಗಿ ನಿರಾಕರಿಸಿದೆ. ದರ್ಶನ್ ಆತ್ಮಹತ್ಯೆಗೂ ಜಾತಿ ತಾರತಮ್ಯಕ್ಕೂ ಸಂಬಂಧವಿಲ್ಲ ಎಂದಿದೆ.

Similar News