ಅದಾನಿ-ಹಿಂಡನ್ ಬರ್ಗ್ ವಿವಾದ: ಕಾಂಗ್ರೆಸ್ ನ ಜಯಾ ಠಾಕೂರ್ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಹೊಸದಿಲ್ಲಿ, ಫೆ. 15: ಅಮೆರಿಕ ಮೂಲದ ಹಿಂಡನ್ ಬರ್ಗ್ ರಿಸರ್ಚ್(Hindenburg Research) ನ ಆರೋಪದ ಹಿನ್ನೆಲೆಯಲ್ಲಿ ಅದಾನಿ ಸಮೂಹ(Adani Group)ದ ವಿರುದ್ಧ ಹಾಲಿ ನ್ಯಾಯಾಧೀಶರ ಸುಪರ್ದಿಯಲ್ಲಿ ತನಿಖೆ ನಡೆಸುವಂತೆ ಕೋರಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್(Jaya Thakur) ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯ ಕುರಿತು ಫೆಬ್ರವರಿ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್(Supreme Court) ಬುಧವಾರ ಒಪ್ಪಿಕೊಂಡಿದೆ.
ಮನವಿಯ ಶೀಘ್ರ ವಿಚಾರಣೆ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಅವರನ್ನು ಪ್ರತಿನಿಧಿಸಿದ ನ್ಯಾಯವಾದಿಯ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ(D.Y. Chandrachud) ಹಾಗೂ ನ್ಯಾಯಮೂರ್ತಿ ಪಿ.ಎಸ್. ನರಸಿಂಹ(P. S. Narasimha) ಅವರನ್ನು ಒಳಗೊಂಡ ಪೀಠ ಪರಿಗಣಿಸಿತು.
ಪೀಠ ಆರಂಭದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಫೆ. 24ರಂದು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿಕೊಂಡಿತು. ಆದರೆ, ಫೆಬ್ರವರಿ 17ರಂದು ಇತರ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ ಎಂದು ನ್ಯಾಯವಾದಿ ಸೂಚಿಸಿದ ಬಳಿಕ ಶುಕ್ರವಾರ ವಿಚಾರಣೆ ನಡೆಸಲು ನಿರ್ಧರಿಸಿತು.
ಅದಾನಿ ಸಮೂಹದ ಶೇರು ಮಾರಾಟ ಪ್ರಕ್ರಿಯೆಯಲ್ಲಿ ಎಲ್ಐಸಿ ಹಾಗೂ ಎಸ್ಬಿಐ ಸಾರ್ವಜನಿಕರ ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿವೆ. ಆದುದರಿಂದ ಈ ಹೂಡಿಕೆ ಕುರಿತಂತೆ ಎಲ್ಐಸಿ ಹಾಗೂ ಎಸ್ಬಿಐಯ ಪಾತ್ರಗಳ ಕುರಿತು ಕೂಡ ತನಿಖೆ ನಡೆಯಬೇಕು ಎಂದು ಅವರು ಕೋರಿದ್ದರು.