ಮಹಿಳಾ ಟ್ವೆಂಟಿ-20 ವಿಶ್ವಕಪ್: ವೆಸ್ಟ್‌ಇಂಡೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ

ದೀಪ್ತಿ ಶರ್ಮಾ ಸ್ಪಿನ್ ಮೋಡಿ, ಮತ್ತೆ ಮಿಂಚಿದ ರಿಚಾ ಘೋಷ್

Update: 2023-02-15 16:43 GMT

 ಕೇಪ್‌ಟೌನ್, ಫೆ.15: ದೀಪ್ತಿ ಶರ್ಮಾ ಅವರ ಅತ್ಯುತ್ತಮ ಬೌಲಿಂಗ್(3-15), ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್(ಔಟಾಗದೆ 44 ರನ್, 32 ಎಸೆತ, 5 ಬೌಂಡರಿ)ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್(33 ರನ್, 42 ಎಸೆತ, 3 ಬೌಂಡರಿ)ಸಾಂದರ್ಭಿಕ ಬ್ಯಾಟಿಂಗ್ ಬಲದಿಂದ ಭಾರತ ಕ್ರಿಕೆಟ್ ತಂಡ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು 6 ವಿಕೆಟ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ 11 ಎಸೆತಗಳು ಬಾಕಿ ಇರುವಾಗಲೇ ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

 ನ್ಯೂಲ್ಯಾಂಡ್ಸ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಟಾಸ್ ಜಯಿಸಿದ ವಿಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಬಲಗೈ ಸ್ಪಿನ್ನರ್ ದೀಪ್ತಿ ಶರ್ಮಾ ದಾಳಿಗೆ ತತ್ತರಿಸಿದ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಯಿತು. ವಿಂಡೀಸ್ ಪರ ಆರಂಭಿಕ ಆಟಗಾರ್ತಿ ಸ್ಟೆಫಾನಿ ಟೇಲರ್ (42 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಕ್ಯಾಂಪ್‌ಬೆಲ್(30 ರನ್) ಹಾಗೂ ಚೆಡಿಯನ್ ನೇಶನ್(ಔಟಾಗದೆ 21)ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಬೌಲಿಂಗ್‌ನಲ್ಲಿ ಪೂಜಾ ವಸ್ತ್ರಕರ್(1-21) ಹಾಗೂ ರೇಣುಕಾ ಸಿಂಗ್(1-22) ತಲಾ ಒಂದು ವಿಕೆಟ್‌ಗಳನ್ನು ಪಡೆದರು.

ಗೆಲ್ಲಲು ಸುಲಭ ಸವಾಲು ಪಡೆದ ಭಾರತಕ್ಕೆ ಶೆಫಾಲಿ ವರ್ಮಾ(28 ರನ್, 23 ಎಸೆತ) ಹಾಗೂ ಸ್ಮತಿ ಮಂಧಾನ(10 ರನ್, 7 ಎಸೆತ)ಮೊದಲ ವಿಕೆಟಿಗೆ 32 ರನ್ ಸೇರಿಸಿ ಬಿರುಸಿನ ಆರಂಭ ನೀಡಿದ್ದರು. ಆದರೆ ಭಾರತವು 43 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಮತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಸ್(1)ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.

ಆಗ ಜೊತೆಯಾದ ಕೌರ್ ಹಾಗೂ ರಿಚಾ ಘೋಷ್ 4ನೇ ವಿಕೆಟಿಗೆ 72 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಾಕ್ ವಿರುದ್ಧ ಪಂದ್ಯದಲ್ಲಿ ತಂಡವನ್ನು ಆಧರಿಸಿದ್ದ ರಿಚಾ ಘೋಷ್ ಮತ್ತೊಮ್ಮೆ ಗಮನಾರ್ಹ ಪ್ರದರ್ಶನ ನೀಡಿದರು.

ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ದೀಪ್ತಿ ಶರ್ಮಾ ಪಂದ್ಯಶ್ರೇಷ್ಠ ಗೌರವ ಪಡೆದರು.
 

Similar News