ಲಖಿಂಪುರ ಹಿಂಸಾಚಾರದ ಎಂಟು ಮಂದಿ ಆರೋಪಿಗಳಿಗೆ ಮಧ್ಯಂತರ ಜಾಮೀನು

Update: 2023-02-15 17:31 GMT

ಲಕ್ನೋ: 2021ರ ಲಖಿಂಪುರ ಹಿಂಸಾಚಾರದ ಎಂಟು ಮಂದಿ ಆರೋಪಿಗಳಿಗೆ ಮಾರ್ಚ್ 20ರವರೆಗೆ ಮಧ್ಯಂತರ ಜಾಮೀನನ್ನು ಅಲಹಾಬಾದ್ ಹೈಕೋರ್ಟ್ ನೀಡಿದೆ.

ಹೀಗಾಗಿ,  ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ಪ್ರಕರಣದ ಎಲ್ಲಾ 13 ಆರೋಪಿಗಳು ಈಗ ಜಾಮೀನಿನ ಮೇಲೆ ಇದ್ದಾರೆ.

ಆಶಿಶ್ ಮಿಶ್ರಾಗೆ ಜಾಮೀನು ನೀಡಿದ ಜನವರಿ 25 ರ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಗಣಿಸಿ ಲಕ್ನೋ ಪೀಠ ಮಂಗಳವಾರ ಈ ಆದೇಶವನ್ನು ನೀಡಿದೆ.

ನ್ಯಾಯಮೂರ್ತಿ ರಾಜೇಶ್ ಕುಮಾರ್ ಸಿಂಗ್ ಚೌಹಾಣ್ ಅವರ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 20 ರಂದು ನಿಗದಿಪಡಿಸಿದೆ.

ಅಂಕಿತ್ ದಾಸ್, ನಂದನ್ ಸಿಂಗ್ ಬಿಶ್ತ್, ಲತೀಫ್ ಅಲಿಯಾಸ್ ಕಾಳೆ, ಸತ್ಯಂ ತ್ರಿಪಾಠಿ ಅಲಿಯಾಸ್ ಸತ್ಯ ಪ್ರಕಾಶ್ ತ್ರಿಪಾಠಿ, ಶೇಖರ್ ಭಾರ್ತಿ, ಆಶಿಶ್ ಪಾಂಡೆ, ರಿಂಕು ರಾಣಾ ಮತ್ತು ಸುಮಿತ್ ಜೈಸ್ವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.

ಆಶಿಶ್ ಮಿಶ್ರಾ ಅವರಿಗೆ ಜಾಮೀನು ನೀಡುವ ಆದೇಶದಲ್ಲಿ ಉಲ್ಲೇಖಿಸಿರುವ ಷರತ್ತುಗಳನ್ನೇ ಪೀಠವು ಅವರಿಗೂ ವಿಧಿಸಿದೆ.

ಆಶಿಶ್ ಮಿಶ್ರಾಗೆ ಎಂಟು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ಜೈಲಿನಿಂದ ಬಿಡುಗಡೆಯಾದ ಒಂದು ವಾರದೊಳಗೆ ಉತ್ತರ ಪ್ರದೇಶವನ್ನು ತೊರೆಯುವಂತೆ ಸೂಚಿಸಿತ್ತು.

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿದ್ದ ನಾಲ್ವರು ರೈತರನ್ನು ಅಕ್ಟೋಬರ್ 3, 2021 ರಂದು ಆಶಿಶ್ ಮಿಶ್ರಾ ಅವರ ತಂದೆ ಅಜಯ್ ಮಿಶ್ರಾ ಅವರಿಗೆ ಸೇರಿದ ಮಹೀಂದ್ರ ಥಾರ್ ಹತ್ತಿಸಿ ಕೊಲ್ಲಲಾಗಿತ್ತು. ಅನಂತರ ನಡೆದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು, ಬೆಂಗಾವಲು ವಾಹನದ ಚಾಲಕ ಮತ್ತು ಓರ್ವ ಪತ್ರಕರ್ತ ಮೃತಪಟ್ಟಿದ್ದರು.

Similar News