ಭಾರತೀಯರೆಲ್ಲರೂ ಹಿಂದೂಗಳು, ಹಾಗಾಗಿ ಇದು ಹಿಂದೂ ರಾಷ್ಟ್ರ: ಆದಿತ್ಯನಾಥ್

Update: 2023-02-16 13:20 GMT

ಹೊಸದಿಲ್ಲಿ: ಭಾರತದ ಎಲ್ಲಾ ನಾಗರಿಕರು ಹಿಂದೂಗಳು, ಹಾಗಾಗಿ ಭಾರತ ಹಿಂದೂ ರಾಷ್ಟ್ರ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬುಧವಾರ ಹೇಳಿದ್ದಾರೆ.

ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಆದಿತ್ಯನಾಥ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸಂದರ್ಶನದ ತುಣುಕನ್ನು ಸಹ ಹಂಚಿಕೊಂಡಿದ್ದಾರೆ.

  

ಹಿಂದೂ ಗುರುತು ಎನ್ನುವುದು ಒಂದು ಧರ್ಮ, ಮತ ಅಥವಾ ಪಂಥಕ್ಕೆ ಸಂಬಂಧಿಸಿದಲ್ಲ, ಬದಲಾಗಿ ಇದು ಸಾಂಸ್ಕೃತಿಕ ಪದವಾಗಿದೆ ಎಂದು ಆದಿತ್ಯನಾಥ್‌ ಪ್ರತಿಪಾದಿಸಿದ್ದಾರೆ.

"ಭಾರತದಿಂದ ಯಾರಾದರೂ ಹಜ್ ಮಾಡಲು ಹೋದಾಗ, ಅವರನ್ನು ಅಲ್ಲಿ ಹಿಂದೂ ಎಂದು ಸಂಬೋಧಿಸಲಾಗುತ್ತದೆ. ಅಲ್ಲಿ ಯಾರೂ ಅವರನ್ನು ಹಾಜಿ ಎಂದು ನೋಡುವುದಿಲ್ಲ, ಯಾರೂ ಅವರನ್ನು ಮುಸ್ಲಿಂ ಎಂದು ಸ್ವೀಕರಿಸುವುದಿಲ್ಲ, ಅಲ್ಲಿ ಅವರನ್ನು ಹಿಂದೂ ಎಂಬ ಹೆಸರಿನಿಂದ ಸಂಬೋಧಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ನೋಡಿದರೆ, ಭಾರತವು ಹಿಂದೂ ರಾಷ್ಟ್ರವಾಗಿದೆ, ಏಕೆಂದರೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹಿಂದೂ." ಎಂದು ಆದಿತ್ಯನಾಥ್‌ ಹೇಳಿದ್ದಾರೆ.

“ಭಾರತದಲ್ಲಿ ಜನಿಸಿದ ಜನರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆ. ಆ ಹಿನ್ನೆಲೆಯಲ್ಲಿ ಯಾರಾದರೂ ತಮ್ಮ ಗುರುತನ್ನು ನೋಡಿದರೆ, ಅವರಿಗೆ ಅದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ” ಎಂದು ಅವರು ಹೇಳಿದರು.

"ನಾವು ಹಿಂದೂವನ್ನು ಧರ್ಮ, ನಂಬಿಕೆ ಮತ್ತು ಪಂಥದೊಂದಿಗೆ ಸಂಯೋಜಿಸಿದರೆ, ನಾವು ಹಿಂದೂವನ್ನು ಅರ್ಥಮಾಡಿಕೊಳ್ಳುವಲ್ಲಿ ತಪ್ಪು ಮಾಡುತ್ತೇವೆ" ಎಂದು ಆದಿತ್ಯನಾಥ್ ಹೇಳಿದರು.

ಸಂವಿಧಾನದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ಆದಿತ್ಯನಾಥ್‌, "ಪ್ರತಿಯೊಬ್ಬ ಭಾರತೀಯನು ಸಂವಿಧಾನದ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿರಬೇಕು, ಅದು ನಮ್ಮ ಮಾರ್ಗದರ್ಶಿಯಾಗಿದೆ." ಎಂದು ಹೇಳಿದ್ದಾರೆ.

  "ಅಖಂಡ ಭಾರತ" ಕಲ್ಪನೆಯು ನಿಜವಾಗಲಿದ್ದು, ಪಾಕಿಸ್ತಾನವು ಅಂತಿಮವಾಗಿ ಭಾರತದೊಳಗೆ ಸೇರಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

"ಆಧ್ಯಾತ್ಮಿಕ ಜಗತ್ತಿನಲ್ಲಿ ಪಾಕಿಸ್ತಾನ ಎನ್ನುವುದು ವಾಸ್ತವವಲ್ಲ. ವಾಸ್ತವವಲ್ಲದ ದೇಶವು ಇಷ್ಟು ದಿನ ಬದುಕಿರುವುದು ಅದೃಷ್ಟ. ಅದು ಇರುವವರೆಗೂ ಭೂಮಿಗೆ ಹೊರೆಯಾಗಲಿದೆ. ಶೀಘ್ರದಲ್ಲೇ ಭಾರತಕ್ಕೆ ಸೇರಲು ಅವರು ಬಯಸಲಿದ್ದಾರೆ” ಎಂದು ಆದಿತ್ಯನಾಥ್‌ ಹೇಳಿದ್ದಾರೆ.

Similar News