ಎಚ್ಎಎಲ್ ದೇಶೀಯವಾಗಿ ಅಭಿವೃದ್ಧಿಗೊಳಿಸಿದ ‘ಬ್ಲಾಕ್ ಬಾಕ್ಸ್’ಗೆ ಡಿಜಿಸಿಎ ಅನುಮೋದನೆ
ಹೊಸದಿಲ್ಲಿ, ಫೆ. 16: ದೇಶೀಯವಾಗಿ ಅಭಿವೃದ್ಧಿಗೊಳಿಸಿದ ತನ್ನ ಕಾಕ್ಪಿಟ್ ವಾಯ್ಸಿ ರೆಕಾರ್ಡರ್ (CVR) ಹಾಗೂ ಫ್ಲೈಟ್ ಡಾಟಾ ರೆಕಾರ್ಡರ್ (FDR)ಗೆ ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯದಿಂದ ಇಂಡಿಯನ್ ಟೆಕ್ನಿಕಲ್ ಸ್ಟಾಂಡರ್ಡ್ ಆರ್ಡರ್ (ITSO) ಅನುಮೋದನೆ ಸ್ವೀಕರಿಸಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ (HAL) ತಿಳಿಸಿದೆ.
ಐಟಿಎಸ್ಒ ನಾಗರಿಕ ವಿಮಾನ ಯಾನದಲ್ಲಿ ಬಳಸುವ ನಿರ್ದಿಷ್ಟ ವಸ್ತುಗಳು, ಭಾಗಗಳು, ಪ್ರಕ್ರಿಯೆಗಳು ಹಾಗೂ ಉಪಕರಣಗಳ ಕನಿಷ್ಠ ಕಾರ್ಯಕ್ಷಮತೆಯ ಮಾನದಂಡವಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್ಎಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಿವಿಆರ್ ಹಾಗೂ ಎಫ್ಡಿಆರ್ ‘ಬ್ಲಾಕ್ ಬಾಕ್ಸ್’ ಎಂದು ಜನಪ್ರಿಯವಾಗಿದೆ.
ಆದರೆ, ವಿಮಾನ ದುರಂತದ ಹಿನ್ನೆಲೆಯಲ್ಲಿ ಪತ್ತೆ ಮಾಡಲು ಸುಲಭವಾಗುವಂತೆ ಈ ದಾಖಲೆಗಳಿಗೆ ಕಿತ್ತಳೆ ಬಣ್ಣ ಬಳಿಯಲಾಗುತ್ತದೆ. ಸಿವಿಆರ್ ಹಾಗೂ ಎಫ್ಡಿಆರ್ ಅನ್ನು ವಿಮಾನ ಅಪಘಾತ ಸಂಭವಿಸಿದ ಸಂದರ್ಭ ವಿಮಾನದ ಸ್ಥಿತಿ ಹಾಗೂ ಅಡಿಯೋವನ್ನು ದಾಖಲಿಸಲು ಬಳಸಲಾಗುತ್ತದೆ. ಅನಂತರ ಇದನ್ನು ವಿಮಾನ ಅಪಘಾತದ ತನಿಖೆಗೆ ಬಳಸಲಾಗುತ್ತದೆ ಎಚ್ಎಎಲ್ ಹೇಳಿದೆ.