ಪ್ರಧಾನಿ ಮೋದಿ ಸಾಕ್ಷ್ಯಚಿತ್ರ ತಯಾರಿಯಲ್ಲಿ ಭಾರತೀಯ ಸಹಯೋಗಿಗಳನ್ನು ಪತ್ತೆಹಚ್ಚಲು ಬಿಬಿಸಿ ಕಚೇರಿಗೆ ಐಟಿ ದಾಳಿ: ವರದಿ

Update: 2023-02-17 13:08 GMT

ಹೊಸದಿಲ್ಲಿ: ಬಿಬಿಸಿಯ (BBC) ಭಾರತದ ಕಚೇರಿಗಳಲ್ಲಿ ಇತ್ತೀಚೆಗೆ ನಡೆಸಲಾದ ಆದಾಯ ತೆರಿಗೆ ಸಮೀಕ್ಷೆಯ ಹಿಂದಿನ ಉದ್ದೇಶ ಆ ಮಾಧ್ಯಮ ಸಂಸ್ಥೆ ಪ್ರಸಾರ ಮಾಡಿದ್ದ ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ ತಯಾರಿಕೆಗೆ ಭಾರತದಲ್ಲಿ ಸಹಾಯ ಮಾಡಿದವರನ್ನು ಪತ್ತೆಹಚ್ಚುವುದಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ ಎಂದು thenewsminute.com ವರದಿ ಮಾಡಿದೆ.

ಆದರೆ ಈ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ವಿದೇಶದಲ್ಲಿ ಸಿದ್ಧಪಡಿಸಲಾಗಿತ್ತು, ಇಲ್ಲಿ ಆ ಕುರಿತು ಯಾವುದೇ  ಮಾಹಿತಿ ದೊರೆಯುವ ಸಾಧ್ಯತೆ ಇರಲಿಲ್ಲ ಎಂದು ಮೂಲಗಳು ಹೇಳಿದೆ.

ಬಿಬಿಸಿಯ ಮುಂಬೈ ಕಚೇರಿಯಲ್ಲಿನ ಸಮೀಕ್ಷೆ ಫೆಬ್ರವರಿ 16ರ ರಾತ್ರಿ ಪೂರ್ಣಗೊಂಡರೆ, ದಿಲ್ಲಿ ಕಚೇರಿಯಲ್ಲಿನ ಸಮೀಕ್ಷೆ ಶುಕ್ರವಾರ ಕೊನೆಗೊಂಡಿದೆ.

ಮುಂದಿನ ಕ್ರಮವಾಗಿ ಆದಾಯ ತೆರಿಗೆ ಇಲಾಖೆ ಟ್ರಾನ್ಸ್‌ಫರ್‌ ಪ್ರೈಸಿಂಗ್‌ ಕುರಿತು ಪರಿಶೀಲಿಸಬಹುದೆಂದು ಹೇಳಲಾಗಿದೆ. ಅಂದರೆ ಬಿಬಿಸಿಯ ಭಾರತದ ಕಚೇರಿಯಿಂದ ಅದರ ವಿದೇಶದ ಕಚೇರಿಗೆ ಕಳುಹಿಸಲಾದ ಒಂದು ನಿರ್ದಿಷ್ಟ ಮೊತ್ತಕ್ಕೆ ಇಲ್ಲಿ ತೆರಿಗೆ ಪಾವತಿಸಬೇಕಿತ್ತೆಂದು ಹೇಳುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ ಎಂದು thenewsminute.com ವರದಿ ಮಾಡಿದೆ.

ಬಿಬಿಸಿಯ ದಿಲ್ಲಿ ಮತ್ತು ಮುಂಬೈ ಕಚೇರಿಗಳ ಪ್ರಮುಖ ಉದ್ಯೋಗಿಗಳ ಫೋನ್‌ನಲ್ಲಿರುವ ಡೇಟಾವನ್ನು ಇಲಾಖೆ ನಕಲಿಸಿದೆ ಎನ್ನಲಾಗಿದ್ದು ಈ ಮೂಲಕ ತನಗೆ ಅಗತ್ಯವಿರುವ ಮಾಹಿತಿಯನ್ನು ಕಂಡುಕೊಳ್ಳಬಹುದು ಎಂದಿದೆ.

ಸಂಸತ್‌ ಅಧಿವೇಶನ ಮುಗಿದ ನಂತರ ಬಿಬಿಸಿ ಕಚೇರಿಯಲ್ಲಿ ಪರಿಶೀಲನೆ ನಡೆಸಲು ಐಟಿ ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿತ್ತೆನ್ನಲಾಗಿದೆ, ಮೇಲಾಗಿ ಇಂತಹ ಪರಿಶೋಧನೆಗಳ ವೇಳೆ ಸಿಸಿಟಿವಿಗಳನ್ನು ಆಫ್‌ ಮಾಡಲಾಗುತ್ತದೆಯಾದರೂ ಈ ನಿರ್ದಿಷ್ಟ ಪ್ರಕರಣದಲ್ಲಿ ಸಿಸಿಟಿವಿ ಆಫ್‌ ಮಾಡದಂತೆ ಸೂಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದೇಶದ 10 ಸೂಕ್ಷ್ಮ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ ಕೇಂದ್ರ

Similar News