ರಾಜ್ಯ ಬಜೆಟ್ 2023: ಉಡುಪಿ ಜಿಲ್ಲೆಯಲ್ಲಿ ಯಾರು ಏನು ಹೇಳಿದರು?

Update: 2023-02-17 14:52 GMT

ಬಡವರು-ದುರ್ಬಲರ ಪರವಾದ ಬಜೆಟ್

*ಮಹಿಳಾ ಕಾರ್ಮಿಕರಿಗೆ ‘ಶ್ರಮ ಶಕ್ತಿ’, ಗ್ರಾಮ ಪಂಚಾಯತ್‌ಗಳ ಅನುದಾನ ಹೆಚ್ಚಳ, ಪೌರ ನೌಕರರ ಖಾಯಮಾತಿ, ಕರಾವಳಿ ಬಂದರು ಅಭಿವೃದ್ಧಿ, ರೈತರ ಶೂನ್ಯ ಬಡ್ಡಿದರ ಸಾಲ ಹೆಚ್ಚಳ, ಅಡಿಕೆ ಬೆಳೆಗಾರರ ರಕ್ಷಣೆಗೆ ಸಂಶೋಧನಾ ಕೇಂದ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಅತ್ಯಧಿಕ ಅನುದಾನ ಮೀಸಲು, ಒಟ್ಟಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೂರಗಾಮಿ ಯೋಚನೆ ಯಿಂದ ಇದೊಂದು ಬಡವರ-ದುರ್ಬಲರ ಪರವಾದ ಬಜೆಟ್.
-ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಸಚಿವ.

ರಾಜಸ್ವ ಹೆಚ್ಚಳದ ಅಮೃತ ಕಾಲದ ಬಜೆಟ್ 

*ಕೋವಿಡ್ ನಂತರದ ದಿನಗಳಲ್ಲಿ ರಾಜ್ಯದ ಹಣಕಾಸು ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಹಿಡಿದಿಡುವ ಮೂಲಕ ಸುಮಾರು 402 ಕೋಟಿ ರೂ. ರಾಜಸ್ವ ಹೆಚ್ಚಳದ ಬಜೆಟ್ ಮಂಡನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಆಯವ್ಯಯ ಮಂಡನೆ. ರಾಜಸ್ವ ವೆಚ್ಚ, ಬಂಡವಾಳ ವೆಚ್ಚ ಹಾಗೂ ಸಾಲ ಮರುಪಾವತಿ ಸೇರಿದಂತೆ 3,09,182 ಕೋಟಿ ರೂ. ಗಾತ್ರದ ಬಜೆಟ್. ರಾಜ್ಯದ ರೈತ ಸಮುದಾಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಕೊಡುಗೆ.

ಶೂನ್ಯ ಬಡ್ಡಿ ಸಾಲ ಪ್ರಮಾಣ 3ರಿಂದ 5 ಲಕ್ಷ ರೂಗೆ ಹೆಚ್ಚಳ, 56 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತ ಕುಟುಂಬಗಳಿಗೆ ವಿಮಾ ಯೋಜನೆ ಕಲ್ಪಿಸಿರುವುದು, ಸ್ತ್ರೀಯರ ಸಬಲೀಕರಣಕ್ಕಾಗಿ ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಹಿಳಾ ಕಾರ್ಮಿಕರಿಗೆ 500ರೂ. ಸಹಾಯ ಧನ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ ಯೋಜನೆ, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ಸೇರಿದಂತೆ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದಾರೆ.

ಇಂಧನ ಕ್ಷೇತ್ರದ ಸುಧಾರಣೆಗಾಗಿ ಗುರುಚರಣ್ ಸಮಿತಿ ವರದಿ ಅನುಷ್ಢಾನದ ಭರವಸೆ. ಮೀನುಗಾರರಿಗೆ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಹತ್ತು ಸಾವಿರ  ವಸತಿ ರಹಿತ ಮೀನುಗಾರರಿಗೆ ಸೂರು ಕಲ್ಪಿಸಲಾಗುತ್ತದೆ. ಪಶ್ಚಿಮವಾಹಿನಿ ಎರಡನೇ ಹಂತದಲ್ಲಿ 378 ಕೋಟಿ ರೂ.ಮೊತ್ತದ ಕಾಮಗಾರಿ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಭರವಸೆ.ಒಟ್ಟಾರೆಯಾಗಿ ಇದು ಎಲ್ಲರನ್ನು ಒಳಗೊಳ್ಳುವ ಅಮೃತ ಕಾಲದ ಬಜೆಟ್.
-ವಿ.ಸುನಿಲಕುಮಾರ್, ರಾಜ್ಯ ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ.

ಚುನಾವಣಾ  ಬಜೆಟ್ 

*ಸರಕಾರ ಬಜೆಟ್ ಗಾತ್ರವನ್ನು 3,09,182 ಕೋಟಿ ರೂ.ಗೆ  ಏರಿಸಿದರೂ ಯೋಜನೆಗಳ ಅನುಷ್ಠಾನದಲ್ಲಿ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಚುನಾವಣೆ ಹಿನ್ನಲೆಯಲ್ಲಿ ಅನುದಾನವನ್ನು ವಿವಿಧ ಇಲಾಖೆಗಳಿಗೆ ವಿಂಗಡಿಸಿ ಸರಕಾರ ಭರವಸೆಗಳ  ಸುರಿಮಳೆಗೈದರೂ ಈ ಅನೈತಿಕ ಸರಕಾರವನ್ನು  ಜನತೆ ಕಿತ್ತೊಗೆಯಲು ನಿರ್ಧರಿಸಿರುವುದರಿಂದ ಬಜೆಟ್‌ನ ಭರವಸೆಗಳು ಘೋಷಣೆಗೆ ಸೀಮಿತವಾಗಲಿದೆ. ಇದಕ್ಕೆ ಹೆಚ್ಚಿನ ಮಹತ್ವವಿಲ್ಲ.
-ಅಶೋಕ್‌ ಕುಮಾರ್ ಕೊಡವೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಉಡುಪಿ.

ಜಿಲ್ಲೆಯ ಬಗ್ಗೆ ಕಾಳಜಿ ವಹಿಸದ ಬಜೆಟ್ 

*ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ದಿಗೆ ಬೇಕಾಗುವ ಯಾವುದೇ ಯೋಜನೆಗಳಿಲ್ಲ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಈ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಇಲ್ಲ. ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ವಿಸ್ತರಿಸಬೇಕಾಗಿತ್ತು. ಅದನ್ನು ಮಾಡಿಲ್ಲ. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರ್ಜೀವಗೊಳಿಸಲು ಯಾವುದೇ ಕ್ರಮ ವಹಿಸದೇ ಜಿಲ್ಲೆಗೆ ಅನ್ಯಾಯ ಮಾಡಿದೆ.

ಹಗಲು-ರಾತ್ರಿ ಹೋರಾಟ ನಡೆಸಿದ ಫಲವಾಗಿ ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೆ ಮಾಸಿಕ 1000ರೂ. ಹೆಚ್ಚಳವಾಗಿದ್ದರೂ ಇಂದಿನ ಬೆಲೆ ಏರಿಕೆಗೆ ಹೋಲಿಸಿದರೆ ಅದು ಎಳ್ಳಷ್ಟೂ ಸಾಲದು. ಇತರೆ ಕಾರ್ಮಿಕ ವಿಭಾಗಕ್ಕೆ ಯಾವುದೇ ಹೆಚ್ಚಳಗಳಿಲ್ಲ. ಜಿಲ್ಲೆಯಲ್ಲಿ ಬಹು ವರ್ಷಗಳಿಂದ ಸಾವಿರಾರು ಮಂದಿಗೆ  ಉದ್ಯೋಗ ನೀಡಿದ ಹಂಚು ಉದ್ಯಮ ಪ್ರೋತ್ಸಾಹಿಸಲು ಯಾವುದೇ ಕ್ರಮಗಳಿಲ್ಲ. ಇಂಥ ಜನ ವಿರೋಧಿ, ಕಾರ್ಮಿಕ ವಿರೋಧಿ ರಾಜ್ಯ ಬಜೆಟ್ ವಿರುದ್ದ ಪ್ರತಿಭಟನೆ ನಡೆಸಬೇಕು.
-ಸುರೇಶ್ ಕಲ್ಲಾಗರ, ಪ್ರಧಾನ ಕಾರ್ಯದರ್ಶಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ.

"ಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಬಜೆಟಿನ ಅಂಕಿಅಂಶಗಳು ಅಪ್ರಸ್ತುತ. ನಾಳೆ ನಮ್ಮದೇ ಸರಕಾರ ಬರಬಹುದು. ನಮ್ಮದೇ ಆದ ಬಜೆಟ್ ಬಗ್ಗೆ ಆಲೋಚನೆ ಮಾಡಿದ್ದೇವೆ ಈಗಾಗಲೇ ಪಂಚರತ್ನ ಯೋಜನೆಗಳ ಸಹಿತ ಅನೇಕ ಅಂಶಗಳನ್ನು ಒಳಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈಗಾಗಲೇ ರೂಪುರೇಷೆಗಳನ್ನು ತಯಾರು ಮಾಡಿದ್ದಾರೆ. ಒಟ್ಟಾರೆಯಾಗಿ ಈ ಬಜೆಟ್ ಓಟಿಗಾಗಿ/ ಚುನಾವಣೆಗಾಗಿ ಜನರನ್ನು ಮರಳುಗೊಳಿಸುವ ಬಜೆಟ್.
-ಯೋಗೇಶ್ ವಿ.ಶೆಟ್ಟಿ, ಜಿಲ್ಲಾಧ್ಯಕ್ಷ ಜಾತ್ಯತೀತ ಜನತಾದಳ ಉಡುಪಿ

ಚುನಾವಣಾ ಪ್ರಣಾಳಿಕಾ ಬಜೆಟ್ 

*ಮುಖ್ಯಮಂತ್ರಿಗಳು ಚುನಾವಣಾ ಪರ್ವಕಾಲದಲ್ಲಿ ಮಂಡಿಸಿದ ಬಜೆಟ್ ಮತದಾರರನ್ನು ಓಲೈಸುವುದರಲ್ಲಿ ಸಂಪೂರ್ಣ ಯಶಸ್ವಿ. ಪ್ರತಿಪಕ್ಷಗಳು ಚುನಾವಣೆಯ ದೃಷ್ಟಿಯಿಂದ  ನೀಡಿದ ಭರವಸೆಯ ಮಾತುಗಳಿಗೆಲ್ಲ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಉತ್ತರ ನೀಡುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಕಾಣಬಹುದು. ಕಾಂಗ್ರೆಸ್ ಇತ್ತೀಚೆಗೆ ನೀಡಿದ ಬಹು ಆಕರ್ಷಕ ಭರವಸೆಯಲ್ಲಿ ಪ್ರತಿ ಗೃಹಿಣಿಗೆ 2 ಸಾವಿರ ಸಹಾಯಧನ  ನೀಡುತ್ತೇವೆ ಅನ್ನುವುದಕ್ಕೆ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ 500 ರೂ. ನೀಡುವ ಭರವಸೆ ನೀಡಿದ್ದಾರೆ.

ಕಾಂಗ್ರೆಸ್‌ನ 200 ಯೂನಿಟ್ ಉಚಿತ ವಿದ್ಯುತ್‌ಗೆ ಪರ್ಯಾಯವಾಗಿ ಬಜೆಟ್‌ನಲ್ಲಿ ಬಡವರಿಗೆ 75 ಯುನಿಟ್  ಮತ್ತು ನೇಕಾರರಿಗೆ ಉಚಿತ ವಿದ್ಯುತ್ ನೀಡುವ ಹೇಳಿಕೆ ನೀಡಿದ್ದಾರೆ. ನಿರುದ್ಯೋಗಿ ಯುವಕರಿಗೆ 2000 ಸಾವಿರ ಸಹಾಯಧನ ನೀಡುವ ಮಾತಿನಲ್ಲಿ ಯುವ ಮತದಾರರ  ಮನವೊಲಿಸುವ ಪ್ರಯತನವನ್ನು ಈ ಬಜೆಟ್ ಮಾಡಿದೆ.
ಸರಕಾರಿ ನೌಕರರ ಬಹು ನಿರೀಕ್ಷೆಯಲ್ಲಿದ್ದ ಹಳೆ ಪಿಂಚಣಿಯ ಕುರಿತಾಗಲಿ, ಏಳನೇ ವೇತನದ ಅನುಷ್ಠಾನದ ಅನುದಾನಕ್ಕಾಗಲಿ ಯಾವುದೆ ಪ್ರಸ್ತಾಪ ಇಲ್ಲದಿರುವುದು ನೌಕರರಲ್ಲಿ ಹತಾಶೆ ಮೂಡಿಸಿದೆ. ಕರಾವಳಿ ಜಿಲ್ಲೆಯಲ್ಲಿ ಬಹು ನಿರೀಕ್ಷೆಯ ಉದ್ಯೋಗ ಸೃಷ್ಟಿಯ ಐಟಿ ಪಾರ್ಕುಗಳ ಸ್ಥಾಪನೆಯ ವಿಷಯ ಪ್ರಸ್ತಾಪವಾಗಲೇ ಇಲ್ಲ. ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಭರವಸೆಯಾಗಿಯೇ ಉಳಿದಿದೆ. ಮಠ ಮಂದಿರ ದೇವಾಲಯಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕೆ 1500 ಕೋಟಿ ವಿನಿಯೋಗಿಸಿರುವುದನ್ನು ಆರ್ಥಿಕ ದೃಷ್ಟಿಯಿಂದ ಹೇಗೆ ಸಮರ್ಥನೆ ಮಾಡಬಹುದು.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ನಿವೃತ್ತ ರಾಜಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥ, ಎಂ.ಜಿ.ಎಂ.ಕಾಲೇಜು ಉಡುಪಿ.

ಯಾವುದೇ ಮಹತ್ವ ಹೊಂದಿರದ ಬಜೆಟ್ 

*ಸರಕಾರ ಕಳೆದ ವರ್ಷದ ಬಜೆಟ್‌ನಲ್ಲಿ 2.65 ಲಕ್ಷ ಕೋಟಿ ರೂ ಅಯವ್ಯಯ ಮಂಡಿಸಿ ಕೇವಲ 1.40 ಲಕ್ಷ  ಕೋಟಿ ವೆಚ್ಚ ಮಾಡಿದೆ. ಈ ಬಾರಿ ಬಜೆಟ್ ಗಾತ್ರ 3,09,182 ಕೋಟಿಗೆ ಏರಿಕೆ ಕಂಡರೂ ಚುನಾವಣೆ ಹಿನ್ನಲೆಯಲ್ಲಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದು ಸಾಮಾನ್ಯ. ಆದರೆ ಕಳೆದ ಬಾರಿಯ ಬಜೆಟ್‌ನ ಯೋಜನೆಗಳನ್ನು ಇನ್ನೂ ಕಾರ್ಯಗತ ಗೊಳಿಸಿಲ್ಲ. ಹೀಗಾಗಿ ಈ ಬಜೆಟ್‌ನ ಅನುಷ್ಠಾನಮುಂದಿನ ಅವಧಿಗೆ ಅಧಿಕಾರ ಪಡೆದಲ್ಲಿ ಮಾತ್ರ ಸಾಧ್ಯ. ಹೀಗಾಗಿ ಈ ಬಜೆಟ್‌ಗೆ ಹೆಚ್ಚಿನ ಮಹತ್ವವಿಲ್ಲ.
-ಭಾಸ್ಕರ ರಾವ್ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ.

ನಿರೀಕ್ಷೆ ಈಡೇರದ ಬಜೆಟ್ 

*ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳದ ಘೋಷಣೆ ಖುಷಿಯ ವಿಷಯ. ಆರನೆಯ ವೇತನ  ಆಯೋಗ, ನಂತರದ ಸಮಿತಿ  ಶಿಪಾರಸ್ಸು  ಮಾಡಿದ್ದರೂ ನಿವೃತ್ತರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯದ,  ಬಹುನಿರೀಕ್ಷೆಯ ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ  ಮಹಾ ವಿದ್ಯಾಲಯದ  ಪ್ರಸ್ತಾಪ  ಇಲ್ಲದಿರುವ ನಿರೀಕ್ಷೆ  ಈಡೇರದ  ಮುಂಗಡಪತ್ರ.
-ಎಸ್.ಎಸ್.ತೋನ್ಸೆ, ರಾಜ್ಯ  ಗ್ರಾಮೀಣಾಭಿವೃದ್ಧಿ  ಸಂಸ್ಥೆಯ  ಮಾಜಿ ಸಂಪನ್ಮೂಲ ವ್ಯಕ್ತಿ ಉಡುಪಿ. 

ಬೋಗಸ್ ಬಜೆಟ್...

*ರಾಜ್ಯದಲ್ಲಿ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯಲಿರುದರಿಂದ ಜನರ ತಲೆಯ ಮೇಲೆ ತುಪ್ಪ ಸವರುವ ಬೋಗಸ್ ಬಜೆಟ್. 2023ರಲ್ಲಿ ಜನರ ಕಿವಿಗೆ ಹೂವು ಮುಡಿಸುವ ಬಜೆಟ್. 2022ರಲ್ಲಿ ಮಂಡನೆಯಾದ ಬಜೆಟ್‌ನಲ್ಲಿ ಇನ್ನೂ 132 ಅಂಶ ಸಂಪೂರ್ಣಗೊಂಡಿಲ್ಲ. ಬಜೆಟ್‌ನಲ್ಲಿ ಬಡವರಿಗೆ ಉಪಯೋಗವಾಗುವಂತ ಯಾವುದೇ ಅಂಶಗಳಿಲ್ಲ. ಬಡವರು ಬಡವರಾಗಿಯೇ ಉಳಿದರು. ರೈತರಿಗೆ, ಮೀನುಗಾರರಿಗೆ ಸಹಾಯ ಮಾಡಿಲ್ಲ. ಮೀನುಗಾರರ ಬಗ್ಗೆ ಕಳಕಳಿ ಇಲ್ಲದ ಸರ್ಕಾರವಿದು.
-ಮನ್ಸೂರ್ ಇಬ್ರಾಹಿಂ, ರಾಜ್ಯ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಜಾತ್ಯತೀತ ಜನತಾ ದಳ.

Similar News