×
Ad

ಟರ್ಕಿ ಭೂಕಂಪ: 11 ದಿನದ ಬಳಿಕ ಮತ್ತೆ ಮೂರು ಮಂದಿಯ ರಕ್ಷಣೆ

Update: 2023-02-17 21:38 IST

ಅಂಕಾರ, ಫೆ.17: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ  ಭೀಕರ ಭೂಕಂಪದಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿರುವಂತೆಯೇ, ಭೂಕಂಪದ ಸುಮಾರು 260 ಗಂಟೆಯ ಬಳಿಕ ಕಲ್ಲುಮಣ್ಣಿನ ರಾಶಿಯಡಿಯಿಂದ 14 ವರ್ಷದ ಬಾಲಕನ ಸಹಿತ 3 ಮಂದಿಯನ್ನು ರಕ್ಷಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆಟಿನ್ ಕೊಕಾ(Fahrettin Koca) ಟ್ವೀಟ್ ಮಾಡಿದ್ದಾರೆ.

ಭೂಕಂಪದಿಂದ ತೀವ್ರ ಹಾನಿಗೊಳಗಾದ ಹತಾಯ್ ಪ್ರಾಂತದ ಅಂತಾಕ್ಯ ನಗರದಲ್ಲಿ ಕುಸಿದುಬಿದ್ದ ಕಟ್ಟಡದ ಅವಶೇಷಗಳಡಿಯಲ್ಲಿ ಸದ್ದುಕೇಳಿ ಬಂದಾಗ ರಕ್ಷಣಾ ಕಾರ್ಯಕರ್ತರು ಜಾಗರೂಕತೆಯಿಂದ ಕಾರ್ಯನಿರ್ವಹಿಸಿ 14 ವರ್ಷದ ಉಸ್ಮಾನ್ ಎಂಬಾತನನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಸ್ಮಾನ್ ತೀವ್ರ ನಿತ್ರಾಣಗೊಂಡಿದ್ದರೂ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ. ಇದಾದ ಒಂದು ಗಂಟೆಯ ಬಳಿಕ, ಇದೇ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ 26 ಮತ್ತು 33 ವರ್ಷದ ಇಬ್ಬರು ವ್ಯಕ್ತಿಗಳನ್ನು ಪತ್ತೆಹಚ್ಚಿ ಹೊರಗೆ ತೆಗೆಯಲಾಗಿದೆ ಎಂದು ಆರೋಗ್ಯ ಇಲಾಖೆಯ ವರದಿ ಹೇಳಿದೆ.

ಈ ಮಧ್ಯೆ,  ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದಿಂದ ಮೃತರ ಸಂಖ್ಯೆ 41,000ದ ಗಡಿ ದಾಟಿದ್ದು ಲಕ್ಷಾಂತರ ಜನತೆ ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Similar News