×
Ad

ಹಿಂಸಾಚಾರಕ್ಕೆ ತಿರುಗಿದ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆ; 10 ಮಂದಿಗೆ ಗಾಯ

Update: 2023-02-17 21:51 IST

ಇಟಾನಗರ, ಫೆ. 17: ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಅರುಣಾಚಲಪ್ರದೇಶ ಸಾರ್ವಜನಿಕ ಸೇವಾ ಆಯೋಗದ ವಿರುದ್ಧ ಇಟಾನಗರದಲ್ಲಿ ಶುಕ್ರವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ನಾಲ್ವರು ಭದ್ರತಾ ಅಧಿಕಾರಿಗಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ.

ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯು ಸೆಲ್ಗಳನ್ನು ಸಿಡಿಸಿದರು ಹಾಗೂ ಲಾಠಿ ಪ್ರಹಾರ ನಡೆಸಿದರು ಎಂದು ಐಜಿಪಿ ಚುಕು ಅಪಾ ಅವರು ಹೇಳಿದ್ದಾರೆ.

‘‘ಕೆಲವು ಪ್ರತಿಭಟನಕಾರರು ಒಂದು ಬೈಕ್, ಒಂದು ನಾಲ್ಕು ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ, ಸೊತ್ತುಗಳಿಗೆ ಹಾನಿ ಉಂಟು ಮಾಡಿದ ಹಾಗೂ ಭದ್ರತಾ ಸಿಬ್ಬಂದಿ ಮೇಲೆ ಕಲ್ಲೆಸೆದ ಬಳಿಕ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತು. ಯಾವುದೇ ಅಹಿತಕರ ಘಟನೆಯನ್ನು ನಿರ್ವಹಿಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಇಟಾಗನರದಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು’’ ಎಂದು ಅಪಾ ಅವರು ತಿಳಿಸಿದ್ದಾರೆ.

ಅರುಣಾಚಲಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯಿತು. ಅರುಣಾಚಲಪ್ರದೇಶ ಸಾರ್ವಜನಿಕ ಸೇವಾ ಆಯೋಗ ಪರೀಕ್ಷೆಗೆ ಅಧ್ಯಕ್ಷರನ್ನಾಗಿ ಶಂತನು ದಯಾಳ್ ಅವರನ್ನು ನೇಮಿಸಿದ ಕುರಿತು ಕೂಡ ಪ್ರತಿಭಟನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ದಯಾಳ್ ಅವರ ಪ್ರಾಯ 61. ಅವರು ಕೇವಲ ಒಂದೇ ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಬಹುದು. ಆಯೋಗ  62 ಅನ್ನು ನಿವೃತ್ತಿ ವಯಸ್ಸು ಎಂದು ನಿಗದಿಗೊಳಿಸಿದೆ ಎಂದು ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಪಾನ್ ಅರುಣಾಚಲ ಜಾಯಿಂಟ್ ಸ್ಟೀರಿಂಗ್ ಕಮಿಟಿ (ಪಿಎಜೆಎಸ್ಸಿ) ತಿಳಿಸಿದೆ.

Similar News