ಮಿಸಿಸಿಪ್ಪಿಯಲ್ಲಿ ಸರಣಿ ಗುಂಡಿನ ದಾಳಿ: ಆರು ಮಂದಿ ಮೃತ್ಯು
ಮಿಸಿಸಿಪ್ಪಿ: ನಗರದ ಟಾಟೆ ಕೌಂಟಿಯಲ್ಲಿ ಶುಕ್ರವಾರ ಸಂಭವಿಸಿದ ಸರಣಿ ಗುಂಡಿನ ದಾಳಿಯಲ್ಲಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಸಿಎನ್‍ಎನ್ ವರದಿ ಮಾಡಿದೆ.
ಈ ಘಟನೆಯ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ. ಅರ್ಕಬುಟ್ಲಾ ಸಮುದಾಯದ ಒಳಗೆ ಈ ಶೂಟಿಂಗ್ ನಡೆದಿದ್ದು, ಅರ್ಕಬುಟ್ಲಾ ರಸ್ತೆಯ ಮಳಿಗೆಯೊಂದರ ಒಳಗೆ ಒಂದು ಗುಂಡಿನ ದಾಳಿನಡೆದಿದೆ ಎಂದು ಟಾಟೆ ಕೌಂಟಿ ಶೆರೀಫ್ ಬ್ರಡ್ ಲಾನ್ಸ್ ಹೇಳಿದ್ದಾರೆ. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ.
ಅರ್ಕಬುಟ್ಲಾ ಅಣೆಕಟ್ಟು ರಸ್ತೆಯ ಮನೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪತಿ ಗಾಯಗೊಂಡಿದ್ದಾರೆ. ಅವರಿಗೂ ಗುಂಡೇಟು ತಗುಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
ಅರ್ಕಬುಟ್ಲಾ ಡ್ಯಾಮ್ ರಸ್ತೆಯಲ್ಲಿ ನಿಂತಿದ್ದ ವಾಹನವೊಂದರಲ್ಲಿ ಶಂಕಿತ ದಾಳಿಕೋರನನ್ನು ಪತ್ತೆ ಮಾಡಿದ ಟಾಟೆ ಕೌಂಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದರು. ಶಂಕಿತ ದಾಳಿಕೋರನ ಗುರುತನ್ನು ಬಹಿರಂಗಪಡಿಸಿಲ್ಲ.
ಆತನ ಬಂಧನದ ಬಳಿಕ ಇತರ ನಾಲ್ವರು ಹತ್ಯೆಯಾಗಿರುವುದು ಪೊಲೀಸರಿಗೆ ತಿಳಿದು ಬಂತು. ಇಬ್ಬರು ಮನೆಯ ಒಳಗೆ ಹಾಗೂ ಇಬ್ಬರು ಮನೆಯ ಹೊರಗೆ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಿಸಿಸಿಪ್ಪಿ ಗವರ್ನರ್ ಟಾಟೆ ರೀವ್ಸ್, ಸರಣಿ ಗುಂಡಿನ ದಾಳಿ ಘಟನೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಹೇಳಿದ್ದಾರೆ. ದಾಳಿಯ ಉದ್ದೇಶ ತಿಳಿದು ಬಂದಿಲ್ಲ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.