ವಿವಾಹ ಸಮಾರಂಭದಲ್ಲಿ ರಸಗುಲ್ಲಾ ವಿಚಾರಕ್ಕೆ ಕಿತ್ತಾಟ: ಓರ್ವನ ಹತ್ಯೆ
ಆಗ್ರಾ: ರಸಗುಲ್ಲಾ ತಿನ್ನುವ ವಿಚಾರಕ್ಕೆ ಹೊಡೆದಾಟ ನಡೆದಿದ್ದರಿಂದ ವಿವಾಹ ಆರತಕ್ಷತೆ ಸಮಾರಂಭವೊಂದು ರಣಾಂಗಣವಾಗಿ ಪರಿವರ್ತನೆಗೊಂಡು, ವಧುವಿನ ಸಂಬಂಧಿ ಎಂದು ಹೇಳಲಾಗಿರುವ 50 ವರ್ಷದ ವ್ಯಕ್ತಿಯೊಬ್ಬನನ್ನು ನಾಲ್ವರು ಅತಿಥಿಗಳು ಥಳಿಸಿ ಹತ್ಯೆ ಮಾಡಿರುವ ಘಟನೆ ಮೈನ್‌ಪುರಿ ಜಿಲ್ಲೆಯ ಕುರವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕಾಪುರ ಗ್ರಾಮದಲ್ಲಿ ನಡೆದಿದೆ ಎಂದು timesofindia ವರದಿ ಮಾಡಿದೆ.
ಹತ್ಯೆಗೀಡಾದ ವ್ಯಕ್ತಿಯನ್ನು ಹರ್ಯಾಣದ ಗ್ರಾಮವೊಂದರ ರಣವೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತನ ಮೇಲೆ ನಾಲ್ವರ ಗುಂಪೊಂದು ದೊಣ್ಣೆ, ಕಬ್ಬಿಣದ ಸಲಾಕೆಯಿಂದ ದಾಳಿ ನಡೆಸಿ ಹತ್ಯೆಗೈದಿದೆ. ಇದರೊಂದಿಗೆ ರಣವೀರ್ ಸಿಂಗ್‌ನ ಭಾಮೈದುನ ರಾಮ್ ಕಿಶೋರ್ ಕೂಡಾ ಗುಂಪಿನ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿಗಳನ್ನು ಬಿಕಾಪುರ್ ಗ್ರಾಮದ ನಿವಾಸಿಗಳಾದ ರಜತ್, ಅಜಯ್, ಸತ್ಯಭಾನ್ ಹಾಗೂ ಭರತ್ ಎಂದು ಗುರುತಿಸಲಾಗಿದೆ. ಗಾಯಾಳು ರಾಮ್ ಕಿಶೋರ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ಘಟನೆಯ ಕುರಿತು ದೂರು ದಾಖಲಿಸಿರುವ ಸಚಿನ್ ಕುಮಾರ್, "ನನ್ನ ಚಿಕ್ಕಪ್ಪ ರಾಮ್ ಕಿಶೋರ್, ರಜತ್ ಎಂಬ ವ್ಯಕ್ತಿಗೆ ಡಬ್ಬಿಯಲ್ಲಿದ್ದ ರಸಗುಲ್ಲಾ ತಿನ್ನದಂತೆ ಆಕ್ಷೇಪಿಸಿದರು. ನಂತರ ಆತ ವಾದಕ್ಕಿಳಿದ. ಇದರ ಬೆನ್ನಿಗೇ ಆತನ ಮೂವರು ಸಹಚರರು ಆತನನ್ನು ಕೂಡಿಕೊಂಡು ಕಾದಾಟಕ್ಕಿಳಿದರು" ಎಂದು ಆರೋಪಿಸಿದ್ದಾರೆ.
ಈ ದೂರನ್ನು ಆಧರಿಸಿ, ಪೊಲೀಸರು ರಜತ್, ಅಜಯ್, ಸತ್ಯಭಾನ್ ಹಾಗೂ ಭರತ್ ಎಂಬವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಹತ್ಯೆಯಲ್ಲದ ಸಾಮೂಹಿಕ ಹತ್ಯಾಕಾಂಡಕ್ಕಾಗಿನ ಶಿಕ್ಷೆ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೈನ್‌ಪುರಿ ಜಿಲ್ಲಾ ವರಿಷ್ಠಾಧಿಕಾರಿ ರಾಜೇಶ್ ಕುಮಾ, "ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಪರಾರಿಯಾಗಿರುವ ಆರೋಪಿಗಳ ಸೆರೆಗೆ ಪ್ರಯತ್ನಗಳು ಮುಂದುವರಿದಿವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ಚಿಹ್ನೆ ಸ್ವೀಕರಿಸಿ, ಚುನಾವಣಾ ಆಯೋಗದ ನಿರ್ಧಾರ ಪರಿಣಾಮಬೀರದು: ಠಾಕ್ರೆಗೆ ಶರದ್ ಪವಾರ್ ಸಲಹೆ