ಏರ್ ಇಂಡಿಯಾದಿಂದ ರೋಸಿ ಹೋಗಿದ್ದೇನೆ: ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಅಸಮಾಧಾನ

Update: 2023-02-18 07:35 GMT

ಹೊಸದಿಲ್ಲಿ: ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೆಬ್ರಾಯ್ ಟಾಟಾ ಒಡೆತನದ ಏರ್ ಇಂಡಿಯಾ ಒದಗಿಸುತ್ತಿರುವ ಸೇವೆಯ ಕುರಿತು ಕಿಡಿ ಕಾರಿದ್ದು, ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, "ಏರ್ ಇಂಡಿಯಾ ಸೇವೆ ಖಾಸಗೀಕರಣಕ್ಕಿಂತ ಮುಂಚೆಯೇ ಉತ್ತಮವಾಗಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ವಿಮಾನ 687 ವಿಳಂಬದ ನಂತರ ನಾನು ಏರ್ ಇಂಡಿಯಾ ಬಗ್ಗೆ ರೋಸಿ ಹೋಗಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪೈಕಿ ಒಂದು ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಕಾರ್ಯಾಚರಣೆಯ ತೊಡಕಿನಿಂದ ವಿಮಾನ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಬಿಬೇಕ್ ದೆಬ್ರಾಯ್, "ಏರ್ ಇಂಡಿಯಾ ಬಗ್ಗೆ ರೋಸಿ ಹೋಗಿದ್ದೇನೆ. ದೆಹಲಿಗೆ ಏರ್ ಇಂಡಿಯಾ 687 ವಿಮಾನ ಕಾಯ್ದಿರಿಸಿದ್ದೆ. ಅದರ ನಿರ್ಗಮನ ಸಮಯ ಸಂಜೆ 4.35 ಆಗಿತ್ತು. ಇದೀಗ ಸಂಜೆ 7 ಗಂಟೆಯಾಗಿದ್ದರೂ ಈ ಕ್ಷಣಕ್ಕೂ ಯಾವುದೇ ಮಾಹಿತಿ ಇಲ್ಲ. ಅದರ ಸೇವೆ ಖಾಸಗೀಕರಣಕ್ಕಿಂತ ಮುಂಚೆಯೇ ಉತ್ತಮವಾಗಿತ್ತು..." ಎಂದು ಕಿಡಿ ಕಾರಿದ್ದರು.

ಇದರೊಂದಿಗೆ ಭವಿಷ್ಯದಲ್ಲೆಂದೂ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಿರಲು ಪ್ರಜ್ಞಾಪೂರ್ವಕವಾಗಿ ನಿರ್ಧರಿಸಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.

"ಇದು ಖಾಸಗೀಕರಣದ ಮೊದಲಿಗಿಂತಲೂ ಕಳಪೆಯಾಗಿದೆ. ಯಾರೂ ಹೊಣೆಗಾರರಾಗಿರುವಂತೆ ಕಾಣುತ್ತಿಲ್ಲ. ನಿರ್ಗಮನದ ಅವಧಿ ಪ್ರತಿ 15 ನಿಮಿಷಕ್ಕೊಮ್ಮೆ ಬದಲಾಗುತ್ತಿದೆ. ಸಿಬ್ಬಂದಿ ವರ್ಗದವರು ನಿರಂತರವಾಗಿ ಪ್ರಕಟಣೆಯನ್ನು ಬದಲಿಸುತ್ತಿದ್ದಾರೆ. @airindian" ಎಂದು ಟ್ವೀಟ್ ಮಾಡಿದ್ದಾರೆ.

ಹೆಚ್ಚು ವಿಮಾನಗಳ ಖರೀದಿಗೆ ಆದೇಶಿಸಿದ ಕೂಡಲೇ ಕೂಡಲೇ ಸೇವೆಯು ದಿಢೀರ್ ಎಂದು ಸುಧಾರಿಸುವುದಿಲ್ಲ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ಬಿಬೇಕ್ ದೆಬ್ರಾಯ್ ಅವರ ಒಂದು ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, "ಕಾರ್ಯಾಚರಣೆಯ ತೊಡಕಿನಿಂದಾಗಿ ವಿಮಾನ ಪ್ರಯಾಣ ವಿಳಂಬವಾಗಿದೆ ಮತ್ತು ವಿಮಾನವು ರಾತ್ರಿ 8 ಗಂಟೆಗೆ ನಿರ್ಗಮಿಸಲಿದೆ. ನಮ್ಮ ತಂಡವು ಎಲ್ಲ ಪ್ರಯಾಣಿಕರಿಗೆ ನೆರವು ನೀಡಲು ಪ್ರಯತ್ನಿಸುತ್ತಿದೆ ಎಂಬ ಭರವಸೆ ನೀಡುತ್ತಿದ್ದೇವೆ" ಎಂದು ಉತ್ತರಿಸಿದೆ. 

ಹೀಗಿದ್ದೂ, ಏರ್ ಇಂಡಿಯಾ ತಂಡವು ಪ್ರಯಾಣಿಕರಿಗೆ ಯಾವುದೇ ನೆರವು ಒದಗಿಸುತ್ತಿಲ್ಲ ಎಂದು ದೆಬ್ರಾಯ್ ಆರೋಪಿಸಿದ್ದಾರೆ.

2022ರಲ್ಲಿ ಟಾಟಾ ಸಮೂಹವು ಏರ್ ಇಂಡಿಯಾವನ್ನು ಖರೀದಿಸಿ, ಈ ವಾರ 350 ಹೆಚ್ಚುವರಿ ವಿಮಾನ ಖರೀದಿಯ ಆಯ್ಕೆಯೊಂದಿಗೆ ಹೊಸದಾಗಿ 450 ವಿಮಾನ ಖರೀದಿಗೆ ಖರೀದಿ ಅದೇಶ ಸಲ್ಲಿಸಿದೆ.

ಇದನ್ನು ಓದಿ:  'ಚುನಾವಣಾ ಆಯೋಗದ ನಿರ್ಧಾರ ಪರಿಣಾಮಬೀರದು': ಹೊಸ ಚಿಹ್ನೆ ಸ್ವೀಕರಿಸುವಂತೆ ಠಾಕ್ರೆಗೆ ಶರದ್ ಪವಾರ್ ಸಲಹೆ

Similar News