ಭಾರತದಲ್ಲಿನ BBC ಆದಾಯವು ಅದರ ಕಾರ್ಯಾಚರಣೆ ವ್ಯಾಪ್ತಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ: ಆದಾಯ ತೆರಿಗೆ ಇಲಾಖೆ

Update: 2023-02-18 08:28 GMT

ಹೊಸದಿಲ್ಲಿ: ಭಾರತದಲ್ಲಿನ ಬಿಬಿಸಿ ಆದಾಯವು ಅದರ ಕಾರ್ಯಾಚರಣೆ ವ್ಯಾಪ್ತಿಯೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂಬ ಅಂಶವು ಆದಾಯ ತೆರಿಗೆ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಬಹಿರಂಗವಾಗಿದೆ ಎಂದು ಶುಕ್ರವಾರ ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ ಎಂದು scroll.in ವರದಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮಂಡಳಿಯು, ಬಿಬಿಸಿಯು ಹಲವು ಪಾವತಿಗಳಿಗೆ ತೆರಿಗೆ ಪಾವತಿ ಮಾಡದಿರುವುದಕ್ಕೆ ಹಲವಾರು ಸಾಕ್ಷ್ಯಾಧಾರಗಳು ದೊರೆತಿದ್ದು, ಈ ಸಂಗತಿಯನ್ನು ಈ ವಿದೇಶಿ ಮಾಧ್ಯಮ ಸಂಸ್ಥೆ ಭಾರತದಲ್ಲಿನ ಆದಾಯ ಎಂದು ಬಹಿರಂಗಪಡಿಸಿಲ್ಲ ಎಂದೂ ಹೇಳಿದೆ.

ಇದಲ್ಲದೆ, ದರ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಹಲವಾರು ಅಕ್ರಮಗಳು ಹಾಗೂ ಅಸ್ಥಿರತೆ ಕಂಡು ಬಂದಿದೆ ಎಂದೂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ, ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು "ಭಾರತ: ಮೋದಿಯ ಪ್ರಶ್ನೆ" ಎಂಬ ಎರಡು ಕಂತಿನ ಸಾಕ್ಷ್ಯಚಿತ್ರ ಪ್ರಸಾರ ಮಾಡಿದ್ದ ಬಿಬಿಸಿಯ ವಿರುದ್ಧ, ಆ ಸಾಕ್ಷ್ಯಚಿತ್ರ ಪ್ರಸಾರವಾದ ಸುಮಾರು ಒಂದು ತಿಂಗಳ ಅಂತರದಲ್ಲಿ ಈ ಆದಾಯ ಪರಿಶೀಲನೆಯನ್ನು ಕಳೆದ ಮಂಗಳವಾರ ಶುರು ಮಾಡಿದ್ದ ಆದಾಯ ತೆರಿಗೆ ಇಲಾಖೆಯು, ಅದನ್ನು ಗುರುವಾರ ರಾತ್ರಿ ಅಂತ್ಯಗೊಳಿಸಿತ್ತು. ಇದರ ಬೆನ್ನಿಗೇ ಹಲವಾರು ಜಾಗತಿಕ ಮಾಧ್ಯಮ ನಿಗಾ ಸಂಸ್ಥೆಗಳು ಭಾರತ ಸರ್ಕಾರದ ನಡೆಯನ್ನು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಯತ್ನ ಎಂದು ಕಟುವಾಗಿ ಟೀಕಿಸಿದ್ದವು.

ಆದರೆ, ಕೇಂದ್ರ ಸರ್ಕಾರ ಮಾತ್ರ ಆದಾಯ ತೆರಿಗೆ ಪರಿಶೀಲನೆಗೂ, ತನಗೂ ಯಾವುದೇ ಸಂಬಂಧವಿಲ್ಲವೆಂದು ಆದಾಯ ತೆರಿಗೆ ಇಲಾಖೆಯ ಕ್ರಮದಿಂದ ಅಂತರ ಕಾಯ್ದುಕೊಂಡಿತ್ತು.

Similar News