ಅವರು ಬದುಕಿದ್ದಾಗಲೇ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದೆವು: ಯುವಕರನ್ನು ವಾಹನ ಸಹಿತ ಸುಟ್ಟು ಕೊಂದ ಆರೋಪಿಯ ಹೇಳಿಕೆ

Update: 2023-02-18 17:09 GMT

ಹೊಸದಿಲ್ಲಿ: ಹರ್ಯಾಣದಲ್ಲಿ ಈ ವಾರದ ಆರಂಭದಲ್ಲಿ ರಾಜಸ್ಥಾನದ ಇಬ್ಬರು ವ್ಯಕ್ತಿಗಳು ವಾಹನದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಜೀವಂತವಾಗಿದ್ದಾಗ ಮೊದಲು ಪೊಲೀಸರ ಬಳಿಕ ಕರೆದೊಯ್ಯಲಾಗಿತ್ತು ಎಂದು ಆರೋಪಿಯೋಓರ್ವ ಹೇಳಿಕೆ ನೀಡಿದ್ದಾಗಿ ಪೊಲೀಸ್ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. 
ಇದನ್ನು ಗೋರಕ್ಷಕರ ದಾಳಿ ಎಂದು ಶಂಕಿಸಲಾಗಿದೆ.

ರಾಜಸ್ಥಾನ ಪೊಲೀಸ್ ಮೂಲಗಳ ಪ್ರಕಾರ, ಹರ್ಯಾಣದ ನುಹ್‌ನಲ್ಲಿ ಬುಧವಾರ ರಾತ್ರಿ ಹಸುಗಳನ್ನು ವಧೆಗಾಗಿ ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ 25 ವರ್ಷದ ನಾಸಿರ್ ಮತ್ತು 35 ವರ್ಷದ ಜುನೈದ್ ಅಲಿಯಾಸ್ ಜುನಾ ಎಂಬ ಇಬ್ಬರ ಮೇಲೆ ನಾಲ್ವರ ತಂಡವು ದಾಳಿ ಮಾಡಿತ್ತು. ದಾಳಿಯಲ್ಲಿ ಅವರಿಬ್ಬರು ತೀವ್ರವಾಗಿ ಗಾಯಗೊಂಡಿದ್ದರು.

ನಿನ್ನೆ ಬಂಧಿಸಲಾದ ಟ್ಯಾಕ್ಸಿ ಚಾಲಕ ಮತ್ತು ಗೋರಕ್ಷಕ ಗುಂಪಿನ ಸದಸ್ಯ ರಿಂಕು ಸೈನಿ ತನಿಖಾಧಿಕಾರಿಗಳಿಗೆ, ಇಬ್ಬರು ವ್ಯಕ್ತಿಗಳನ್ನು ಹರಿಯಾಣದ ಫಿರೋಜ್‌ಪುರ ಜಿರ್ಕಾದ ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ದನ ಕಳ್ಳಸಾಗಣೆ ಆರೋಪದ ಮೇಲೆ ಜುನೈದ್ ಮತ್ತು ನಾಸಿರ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಬೇಕೆಂದು ಸೈನಿ ಮತ್ತು ಅವರ ಗುಂಪು ಬಯಸಿದೆ ಎಂದು ಅವರು ಹೇಳಿದರು. ಆದರೆ ಇಬ್ಬರು ಅರೆಜೀವವಾಗಿದ್ದುದನ್ನು ಕಂಡು ಪೊಲೀಸರು ತಬ್ಬಿಬ್ಬಾಗಿ ಅವರನ್ನು ಬಿಡಲು ಹೇಳಿದರು. ಈ ಆರೋಪದ ಬಗ್ಗೆ ಹರಿಯಾಣ ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ.

ಸ್ವಲ್ಪ ಸಮಯದ ನಂತರ, ಜುನೈದ್ ಮತ್ತು ನಾಸಿರ್ ತಮ್ಮ ಗಾಯಗಳಿಂದ ಸಾವನ್ನಪ್ಪಿದರು. ನಂತರ ಭಯಭೀತರಾದ ಗೋರಕ್ಷಕರ ಗುಂಪು ಶವಗಳನ್ನು ವಿಲೇವಾರಿ ಮಾಡುವ ವಿಧಾನಗಳಿಗಾಗಿ ತಮ್ಮ ಸಹಚರರನ್ನು ಸಂಪರ್ಕಿಸಿತು ಎಂದು ಮೂಲಗಳು ತಿಳಿಸಿವೆ.

ಅವರು ಅಂತಿಮವಾಗಿ ತಮ್ಮ ಬೊಲೆರೊ ಎಸ್‌ಯುವಿ ಮತ್ತು ಎರಡೂ ದೇಹಗಳನ್ನು 200 ಕಿಮೀ ದೂರದಲ್ಲಿರುವ ಭಿವಾನಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದರು. ಗುರುವಾರ ಮುಂಜಾನೆ ಎರಡೂ ದೇಹಗಳನ್ನು ವಾಹನದೊಂದಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸೈನಿ ಪ್ರಕಾರ, ಅಪರಾಧದ ಸ್ಥಳದಿಂದ ದೂರದಲ್ಲಿ ಅದನ್ನು ಸುಟ್ಟುಹಾಕಿದರೆ ದೇಹಗಳನ್ನು ಮತ್ತು ಸುಟ್ಟ ವಾಹನವನ್ನು ಯಾರೂ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ ಎಂದು ಅವರು ಅಂದುಕೊಂಡಿದ್ದರು. ಆದರೆ, ಬೊಲೆರೊದ ಚಾಸಿಸ್ ನಂಬರ್ ನಿಂದ ಅವರನ್ನು ಜುನೈದ್ ಮತ್ತು ನಾಸಿರ್ ಎಂದು ಗುರುತಿಸಲಾಗಿದೆ.

ರಾಜಸ್ಥಾನ ಪೊಲೀಸ್ ಮೂಲಗಳ ಪ್ರಕಾರ, ಬಲಿಪಶುಗಳ ಕುಟುಂಬಗಳು ಹೆಸರಿಸಿದ ಪ್ರಮುಖ ಶಂಕಿತರಲ್ಲಿ ಒಬ್ಬನಾದ ಬಜರಂಗದಳದ ಮೋನು ಮಾನೇಸರ್ ಅಪಹರಣದಲ್ಲಿ ಭಾಗಿಯಾಗಿಲ್ಲ. ಆದಾಗ್ಯೂ, ಆತ ಅಪಹರಣಕಾರರೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ದಾರಿಯುದ್ದಕ್ಕೂ ಅವರಿಗೆ ಸಹಾಯ ಮಾಡಿದ್ದ ಎನ್ನಲಾಗಿದೆ.

ಉಳಿದ ಹಂತಕರಿಗಾಗಿ ಹಲವು ಪೊಲೀಸ್ ತಂಡಗಳು ಹುಡುಕಾಟ ನಡೆಸುತ್ತಿವೆ. ಸೈನಿ ಮತ್ತು ಮೋನು ಮಾನೇಸರ್ ಮಾತ್ರವಲ್ಲದೇ, ಸಂತ್ರಸ್ತರ ಕುಟುಂಬಗಳು ಅನಿಲ್, ಶ್ರೀಕಾಂತ್ ಮತ್ತು ಲೋಕೇಶ್ ಸಿಂಗ್ಲಾ ಎಂಬ ಇತರ ಮೂವರನ್ನು ಹೆಸರಿಸಿದ್ದಾರೆ.

ಆರೋಪಿ ಮೋನು ಮಾನೇಸರ್ ನ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲು ಹರಿಯಾಣ ಅಧಿಕಾರಿಗಳು ಮುಂದಾಗಿದ್ದರೆ, ಆತನ ರಾಜ್ಯದ ಆಡಳಿತಾರೂಢ ಬಿಜೆಪಿಯ ಉನ್ನತ ನಾಯಕರೊಂದಿಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಅವರ ರಾಜಕೀಯ ಸಂಪರ್ಕಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ. ಹಲವು ಮಾರಕಾಸ್ತ್ರಗಳೊಂದಿಗೆ ಈತನ ಫೋಟೊ ಹಾಗೂ ವೀಡಿಯೊಗಳೂ ವೈರಲ್‌ ಆಗಿವೆ.

Similar News