ಫೆ. 22ರಂದು ದಿಲ್ಲಿ ಮೇಯರ್ ಚುನಾವಣೆ
Update: 2023-02-18 21:59 IST
ಹೊಸದಿಲ್ಲಿ, ಫೆ. 18: ದಿಲ್ಲಿ ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯನ್ನು ಫೆಬ್ರವರಿ 22ರಂದು ನಡೆಸುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ರ ಪ್ರಸ್ತಾವಕ್ಕೆ ಲೆಫ್ಟಿನೆಂಟ್ ಗವರ್ನರ್ ಶನಿವಾರ ಅಂಗೀಕಾರ ನೀಡಿದ್ದಾರೆ.
ದಿಲ್ಲಿ ಮೇಯರ್ ಚುನಾವಣೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ನಲ್ಲಿ ಆಮ್ ಆದ್ಮಿ ಪಕ್ಷ (ಆಪ್)ಕ್ಕೆ ದೊಡ್ಡ ವಿಜಯ ಲಭಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಲೆಫ್ಟಿನೆಂಟ್ ಗವರ್ನರ್ರಿಂದ ನೇಮಕಗೊಂಡ ಮಹಾನಗರ ಪಾಲಿಕೆ ಸದಸ್ಯರು ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಚುನಾವಣೆಯು ಫೆಬ್ರವರಿ 22ರಂದು ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿ ಎಮ್ಸಿಡಿ ಸದನ್ನಲ್ಲಿ ನಡೆಯಲಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಕೇಂದ್ರ ಸರಕಾರದಿಂದ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆಯನ್ನು ಎರಡು ತಿಂಗಳ ಅವಧಿಯಲ್ಲಿ ಮೂರು ಬಾರಿ ಮುಂದೂಡಲಾಗಿತ್ತು.