ಟ್ರಾಫಿಕ್ ಜಾಮ್: 2 ಕಿ.ಮೀ. ಓಡಿ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿನಿಯರು!

Update: 2023-02-19 02:16 GMT

ಪಾಟ್ನಾ: ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡ ಹಲವು ಮಂದಿ ವಿದ್ಯಾರ್ಥಿನಿಯರು, ಎರಡು ಕಿಲೋಮೀಟರ್ ದೂರ ಓಡಿ, ಪರೀಕ್ಷಾ ಕೇಂದ್ರವನ್ನು ತಲುಪಿದ ಘಟನೆ ವರದಿಯಾಗಿದೆ. ಘಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಕೈಮೂರು ಪಟ್ಟಣದಲ್ಲಿ ಶುಕ್ರವಾರ ಮೆಟ್ರಿಕ್ಯುಲೇಶನ್ ಪರೀಕ್ಷೆ ಬರೆಯಲು ವಿದ್ಯಾರ್ಥಿನಿಯರು ತೆರಳುತ್ತಿದ್ದ ಸಂದರ್ಭದಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.

"ವಿದ್ಯಾರ್ಥಿನಿಯರು ತಮ್ಮ ಪೋಷಕರ ಜತೆಗೆ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೊರಟಿದ್ದರು. ಆದರೆ ಅವರ ವಾಹನ, ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ವಿದ್ಯಾರ್ಥಿನಿಯರು ಮತ್ತು ಪೋಷಕರು ಕಂಗಾಲಾದರು. ಕೆಲವರು ತಮ್ಮ ಪೋಷಕರ ಬೈಕ್ ಮತ್ತೆ ಕೆಲವರು ರಿಕ್ಷ ಅಥವಾ ಕಾರುಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗುತ್ತಿದ್ದರು" ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಮಯ ಮೀರುತ್ತಿದ್ದು, ಸಂಚಾರ ವ್ಯವಸ್ಥೆ ಸರಿಯಾಗುವ ಸೂಚನೆ ಕಾಣದಿದ್ದಾಗ, ವಿದ್ಯಾರ್ಥಿನಿಯರು ತಮ್ಮ ವಾಹನಗಳಿಂದ ಇಳಿದು ಕೈಯಲ್ಲಿ ಹಾಲ್‌ಟಿಕೆಟ್ ಹಾಗೂ ಪೆನ್ನುಗಳನ್ನು ಹಿಡಿದುಕೊಂಡು ಹೆದ್ದಾರಿಯಲ್ಲಿ ಎರಡು ಕಿಲೋಮೀಟರ್ ದೂರ ಓಡಿಕೊಂಡು ಹೋಗಿ ಪರೀಕ್ಷಾ ಕೇಂದ್ರಗಳನ್ನು ತಲುಪಿದರು. ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ಈ ಘಟನೆ ಬಗ್ಗೆ ತಿಳಿದು ಆಘಾತವಾಯಿತು. ಬಳಿಕ ಸಂಚಾರ ದಟ್ಟಣೆ ತೆರವುಗೊಳಿಸಲಾಯಿತು" ಎಂದು ಕೈಮೂರು ಜಿಲ್ಲಾ ಶಿಕ್ಷಣಾಧಿಕಾರಿ ಸುಮನ್ ಶರ್ಮಾ ಹೇಳಿದ್ದಾರೆ. ಸಂಚಾರ ದಟ್ಟಣೆ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಪದೇ ಪದೇ ವರದಿ ಮಾಡಿದರೂ, ಸಮಸ್ಯೆ ಹಾಗೆಯೇ ಮುಂದುವರಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Similar News