ಟೆಸ್ಟ್‌ನಲ್ಲಿ ಕೆ.ಎಲ್.ರಾಹುಲ್ ನೀರಸ ಪ್ರದರ್ಶನ: ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕಿಡಿ

Update: 2023-02-19 02:55 GMT

ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲೂ ಕೆ.ಎಲ್.ರಾಹುಲ್ ಅವರ ಕಳಪೆ ಪ್ರದರ್ಶನ ಮುಂದುವರಿದಿದೆ. ಮೊದಲ ಟೆಸ್ಟ್‌ನಲ್ಲಿ ಕೇವಲ 20 ರನ್ ಗಳಿಸಿದ್ದ ಅವರು, ಎರಡನೇ ಟೆಸ್ಟ್‌ನ ಎರಡನೇ ದಿನ 41 ಎಸೆತಗಳಲ್ಲಿ 17 ರನ್‌ಗಳಿಗೆ ಔಟ್ ಆದರು. ಈ ಪ್ರತಿಭಾವಂತ ಬ್ಯಾಟ್ಸ್‌ಮನ್ 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ತಮ್ಮ ಕೊನೆಯ ಅರ್ಧಶತಕ ಗಳಿಸಿದ್ದರು. ಶನಿವಾರ ಕೂಡಾ ಆಸೀಸ್ ವಿರುದ್ಧ ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.

ಭಾರತ ತಂಡದ ಈ ಆರಂಭಿಕ ಆಟಗಾರನ ವಿರುದ್ಧ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಕಿಡಿ ಕಾರಿದ್ದಾರೆ. "ನೀರಸ ಪ್ರದರ್ಶನ ಮುಂದುವರಿದಿದೆ. ನಿರೀಕ್ಷೆಯ ರನ್ ಗಳಿಸದ ಆಟಗಾರರ ವಿರುದ್ಧ ಆಡಳಿತ ವ್ಯವಸ್ಥೆ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಭಾರತ ತಂಡದ ಅಗ್ರ ಕ್ರಮಾಂಕದ ಯಾವ ಬ್ಯಾಟ್ಸ್‌ಮನ್ ಕೂಡಾ ಕಳೆದ 20 ವರ್ಷದಲ್ಲಿ ಇಷ್ಟೊಂದು ಕಳಪೆ ಸರಾಸರಿ ಹೊಂದಿಲ್ಲ. ಅವರ ಸೇರ್ಪಡೆ ಮೂಲಕ ಪ್ರತಿಭಾವಂತ ಆಟಗಾರರಿಗೆ ಉದ್ದೇಶಪೂರ್ವಕವಾಗಿ ಅವಕಾಶ ನಿರಾಕರಿಸಿದಂತಾಗುತ್ತದೆ. ಫಾರ್ಮ್‌ನಲ್ಲಿರುವ ಪ್ರತಿಭಾವಂತ ಯುವಕರು ಅಂತಿಮ 11ರ ತಂಡದಿಂದ ಅವಕಾಶ ವಂಚಿತರಾಗುತ್ತಿದ್ದಾರೆ" ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

"ಶಿಖರ್ 40ಕ್ಕೂ ಹೆಚ್ಚು ಸರಾಸರಿ ಹೊಂದಿದ್ದರೆ ಮಯಾಂಕ್ ಅಗರ್‌ವಾಲ್ ಎರಡು ದ್ವಿಶತಕಗಳೊಂದಿಗೆ 41ಕ್ಕೂ ಹೆಚ್ಚು ಸರಾಸರಿ ಹೊಂದಿದ್ದಾರೆ. ಶುಭ್‌ಮನ್ ಗಿಲ್ ಫಾರ್ಮ್‌ನಲ್ಲಿದ್ದಾರೆ. ಸರ್ಫರಾಜ್ ಅವರ ಕಾಯುವಿಕೆ ಮುಗಿದಿಲ್ಲ.. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಲವು ಮಂದಿಯನ್ನು ನಿರ್ಲಕ್ಷಿಸಲಾಗುತ್ತಿದೆ. ರಾಹುಲ್ ಸೇರ್ಪಡೆ, ನ್ಯಾಯದ ಮೇಲಿನ ನಂಬಿಕೆಯನ್ನೇ ಅಲುಗಾಡಿಸುತ್ತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

Similar News