×
Ad

ನಾನು ಗೋಮಾಂಸ ತಿನ್ನುತ್ತೇನೆ, ಗೋಸೇವನೆಯನ್ನು ಪಕ್ಷ ವಿರೋಧಿಸಿಲ್ಲ: ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ

Update: 2023-02-19 17:02 IST

ಹೊಸದಿಲ್ಲಿ: ಮೇಘಾಲಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮೇಘಾಲಯದ ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಟ್ ಮಾವ್ರಿ ಅವರು, ಬಿಜೆಪಿಯು ಗೋಮಾಂಸ ಸೇವನೆಗೆ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾನು ಸ್ವತಃ ಗೋಮಾಂಸ ತಿನ್ನುವುದಾಗಿಯೂ, ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದೂ ಹೇಳಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಚರ್ಚ್ ಮೇಲೆ ದಾಳಿ ನಡೆದಿಲ್ಲ ಮತ್ತು ಪಕ್ಷವು ಗೋಮಾಂಸ ಸೇವನೆಗೆ ಯಾವುದೇ ನಿರ್ಬಂಧವನ್ನು ಹಾಕಿಲ್ಲ ಎಂದು IANS ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾವ್ರಿ ಹೇಳಿದ್ದಾರೆ.

“ನಾನು ಗೋಮಾಂಸ ತಿನ್ನುತ್ತೇನೆ ಮತ್ತು ನಾನು ಬಿಜೆಪಿಯಲ್ಲಿದ್ದೇನೆ, ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೇಘಾಲಯದ ಜನತೆ ಈ ಬಾರಿ ಬಿಜೆಪಿ ಜೊತೆಗಿದ್ದಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ. ಮಾರ್ಚ್ 2 ರಂದು ನೀವು ಅದನ್ನು ನೋಡುತ್ತೀರಿ, ”ಎಂದು ಅವರು ಹೇಳಿದರು.

ಕ್ರಿಶ್ಚಿಯನ್‌ ಬಹು ಸಂಖ್ಯಾತರಾಗಿರುವ ಮೇಘಾಲಯದಲ್ಲಿ ಜನರು ಗೋಮಾಂಸ ನಿಷೇಧ, ಸಿಎಎ ಮತ್ತು ಇತರ ವಿಷಯಗಳಲ್ಲಿ ಬಿಜೆಪಿಯ ಕಠಿಣ ನಿಲುವುಗಳನ್ನು ಒಪ್ಪಿಕೊಳ್ಳಲು ಸಿದ್ಧರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ "ಉತ್ತಮ ಪ್ರದರ್ಶನ" ನೀಡಲಿದೆ ಎಂದು ಮಾರ್ವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಈ ಬಾರಿ, ನಾವು ರಾಜ್ಯದ ಎಲ್ಲಾ 60 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನಾವು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇವೆ”ಎಂದು ಅವರು ಹೇಳಿದರು.

ಮೇಘಾಲಯ ವಿಧಾನಸಭೆ ಚುನಾವಣೆಯು 27 ಫೆಬ್ರವರಿ 2023 ರಂದು ನಡೆಯಲಿದೆ. ಮಾರ್ಚ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಜಿ20 ಪ್ರತಿನಿಧಿಗಳಿಗೆ ಸ್ವಾಗತ ಕಾರ್ಯಕ್ರಮ: ಹೂಕುಂಡ ಕಾಯಲು ಆಗ್ರಾ ಪೊಲೀಸರ ನಿಯೋಜನೆ!

Similar News