ಜಿ20 ಪ್ರತಿನಿಧಿಗಳಿಗೆ ಸ್ವಾಗತ ಕಾರ್ಯಕ್ರಮ: ಹೂಕುಂಡ ಕಾಯಲು ಆಗ್ರಾ ಪೊಲೀಸರ ನಿಯೋಜನೆ!

ಆಗ್ರಾ: ಆಗ್ರಾ ಪೊಲೀಸರನ್ನು ತಾಜ್ಮಹಲ್ ಮಾರ್ಗದ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿರಿಸಿರುವ ಹೂಕುಂಡಗಳನ್ನು ಕಾಯುವ ಕೆಲಸಕ್ಕೆ ಒತ್ತಾಯಪೂರ್ವಕವಾಗಿ ನಿಯೋಜಿಸಲಾಗಿದ್ದು, ಇದು ಹಲವರ ಕಣ್ಣಿಗೆ ವಿಚಿತ್ರವಾಗಿ ಕಾಣಿಸತೊಡಗಿದೆ. ಆದರೆ, ಸೆಪ್ಟೆಂಬರ್ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೂ ಮುನ್ನ ಈ ತಿಂಗಳ ಆರಂಭದಲ್ಲಿ ಆಗಮಿಸಿದ್ದ ಜಿ20 ಪ್ರತಿನಿಧಿಗಳ ಸ್ವಾಗತಕ್ಕಾಗಿ ಇರಿಸಲಾಗಿದ್ದ ಹೂಕುಂಡಗಳ ಕಳವು ಹಾಗೂ ಧ್ವಂಸವನ್ನು ತಪ್ಪಿಸಲು ಆಗ್ರಾ ನಗರಾಡಳಿತವು ಹತ್ತಾರು ಪೊಲೀಸ್ ಸಿಬ್ಬಂದಿಯನ್ನು ಹೂಕುಂಡಗಳ ಕಾವಲಿಗೆ ನಿಯೋಜಿಸಿದೆ ಎಂದು theprint.in ವರದಿ ಮಾಡಿದೆ.
ಖೇರಿ ವಿಮಾನ ನಿಲ್ದಾಣ ಹಾಗೂ ತಾಜ್ಮಹಲ್ ನಡುವೆ ನಾಲ್ಕು ಪೊಲೀಸ್ ಠಾಣೆಗಳಾದ ಶಾಗಂಜ್, ಸದರ್, ರಕಬ್ಗಂಜ್ ಹಾಗೂ ತಾಜ್ಗಂಜ್ ಪೊಲೀಸ್ ಠಾಣೆಗಳು ಬರುತ್ತವೆ. ಈ ಮಾರ್ಗದಲ್ಲಿ ನಗರದ ಹಸಿರೀಕರಣವನ್ನು ಬಿಂಬಿಸಲು ದಾರಿಯುದ್ಧಕ್ಕೂ ಶೃಂಗಾರದೊಂದಿಗೆ ಸಾವಿರಾರು ಹೂಕುಂಡಗಳನ್ನು ಜಿಲ್ಲಾಡಳಿತ ಇರಿಸಿತ್ತು. ಆದರೆ, ಜಿ20 ಪ್ರತಿನಿಧಿಗಳು ವಾಪಸ್ಸಾದ ಸುದ್ದಿ ವರದಿಯಾಗುವ ಮುನ್ನವೇ ಹೂಕುಂಡಗಳ ಕಳವು ಹಾಗೂ ಧ್ವಂಸದಂತಹ ಪ್ರಕರಣಗಳು ವರದಿಯಾಗಿದ್ದವು. ಈ ಮಾರ್ಗದಲ್ಲಿನ ಹೂಕುಂಡಗಳು, ಎಲ್ಇಡಿ ಲೈಟ್ಗಳು ಹಾಗೂ ಬ್ಯಾನರ್ಗಳನ್ನು ಕಿತ್ತೆಸೆಯಲಾಗಿತ್ತು ಎಂದು ವರದಿಯಾಗಿದೆ.
ಫತೇಬಾದ್ ರಸ್ತೆಯ ಸೆಲ್ಫಿ ಪಾಯಿಂಟ್ನಿಂದ ಒಂದೇ ರಾತ್ರಿ ಎಪ್ಪತ್ತಕ್ಕೂ ಹೆಚ್ಚು ಹೂಕುಂಡಗಳ ಕಳವು ಪ್ರಕರಣ ವರದಿಯಾಗಿತ್ತು. ಹೀಗಾಗಿ, ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಚರ್ಚಿತ್ ಗೌರ್ ಫೆಬ್ರವರಿ 14ರಂದು ತಾಜ್ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರಿನ ಪ್ರತಿಯು The Print ಸುದ್ದಿ ಸಂಸ್ಥೆಗೆ ಲಭ್ಯವಾಗಿದೆ.
ಹೂಕುಂಡಗಳ ಕಳವು ಹಾಗೂ ಧ್ವಂಸವನ್ನು ತಪ್ಪಿಸಲು ಭಾರಿ ಪ್ರಮಾಣದ ಪೊಲೀಸರ ನಿಯೋಜನೆ, ದುರ್ಬಲ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಹಾಕಬೇಕು ಎಂಬ ಸಲಹೆಗಳು ಬಂದ ಹಿನ್ನೆಲೆಯಲ್ಲಿ ಆಗ್ರಾ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ವರದಿಯಾಗಿದೆ.







