×
Ad

ಕಾರ್ಕಳ ಬಿಟ್ಟರೆ ಬೇರೆ ಕ್ಷೇತ್ರದಿಂದ ಮುತಾಲಿಕ್‌ರಿಗೆ ಬಿಜೆಪಿ ಟಿಕೆಟ್ ಭರವಸೆ: ಮೋಹನ್ ಭಟ್

"ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲೇ ಸ್ಪರ್ಧಿಸುವುದಾದರೆ ಶ್ರೀರಾಮಸೇನೆ ಸಂಘಟನೆಯನ್ನು ನಮಗೆ ಬಿಟ್ಟುಕೊಡಲಿ"

Update: 2023-02-19 19:58 IST

ಉಡುಪಿ: ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಉತ್ತರ ಕರ್ನಾಟಕದ ತೇರದಾಳ ಅಥವಾ ಜಮಖಂಡಿ ಕ್ಷೇತ್ರದಿಂದ ಬಿಜೆಪಿಯಲ್ಲಿ ಟಿಕೆಟ್ ನೀಡುವುದಾಗಿ ಸಿಟಿ ರವಿ ಈಗಾಗಲೇ ಭರವಸೆ ನೀಡಿದ್ದಾರೆ. ಆದುದರಿಂದ ಮುತಾಲಿಕ್‌ರವರು ಕಾರ್ಕಳ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಶ್ರೀರಾಮಸೇನೆ ಮಂಗಳೂರು ವಿಭಾಗಾಧ್ಯಕ್ಷ ಮೋಹನ್ ಭಟ್ ಒತ್ತಾಯಿಸಿದ್ದಾರೆ.

ಉಡುಪಿ ಕರಾವಳಿ ಬೈಪಾಸ್‌ನ ಶಾರದಾ ಇಂಟರ್‌ನ್ಯಾಶನಲ್ ಹೊಟೇಲಿನಲ್ಲಿ ರವಿವಾರ ನಡೆದ ಶ್ರೀರಾಮಸೇನೆ ಸಂಘಟನೆಯ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಸಂಘಟನೆಯ ಕೆಲ ರಾಜ್ಯ ನಾಯಕರು ಹಾಗೂ ಉದ್ಯಮಿ ವಿವೇಕಾನಂದ ಶೆಣೈ ಮತ್ತು ವಕೀಲ ಹರೀಶ್ ಅಧಿಕಾರಿ ಸೇರಿಕೊಂಡು ಪ್ರಮೋದ್ ಮುತಾಲಿಕ್ ಅವರನ್ನು ಹೈಜಾಕ್ ಮಾಡಿ ಕಾರ್ಕಳ ಕ್ಷೇತ್ರದಲ್ಲಿ ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಇವರೆಲ್ಲರು ರಾಜಕೀಯ ದುರಾಸೆಯಿಂದ ಇಡೀ ಸಂಘಟನೆಯನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಪರಮೋಚ್ಛ ನಾಯಕರಾಗಿರುವ ಪ್ರಮೋದ್ ಮುತಾಲಿಕ್ ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅವರ ಜೊತೆ ನಮ್ಮ ಸಂಘಟನೆಯ ಮಾರ್ಯದೆ ಹೋಗುತ್ತದೆ. ಇದು ಇತಿಹಾಸದಲ್ಲೇ ದೊಡ್ಡ ದುರಂತ ಆಗುತ್ತದೆ ಎಂದರು.

ವಾರದ ಹಿಂದೆ ಪತ್ರಿಕಾಗೋಷ್ಠಿ ಕರೆದು ಈ ವಿಚಾರ ಹೇಳಿದಾಗ ಕೆಲವರು ನನ್ನ ವಿರುದ್ಧ ಹಣ ಪಡೆದುಕೊಂಡಿದ್ದೇನೆ ಎಂಬ ಆರೋಪ ಮಾಡಿದರು. ನನ್ನ ಮೇಲೆ ಆರೋಪ ಮಾಡಿದವರು ಯಾರು ಕೂಡ ಸಂಘಟನೆಯ ಕಾರ್ಯಕರ್ತ ರಲ್ಲ. ನನ್ನ ಮೇಲೆ ಆರೋಪ ಮಾಡಿದವರು ತಾಕತ್ತಿದ್ದರೆ ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ, ಧರ್ಮಸ್ಥಳದ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ. ನಾನು ಹಣ ತೆಗೆದುಕೊಂಡಿಲ್ಲ ಎಂದು ಎಲ್ಲಿ ಬೇಕಾದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದರು.

ಪ್ರಮೋದ್ ಮುತಾಲಿಕ್ ಕಾರ್ಕಳದಲ್ಲೇ ಸ್ಪರ್ಧಿಸುವುದಾದರೆ ಶ್ರೀರಾಮಸೇನೆ ಸಂಘಟನೆಯನ್ನು ನಮಗೆ ಸ್ವತಂತ್ರವಾಗಿ ಬಿಟ್ಟುಕೊಡಲಿ. ನಿಮ್ಮ ರಾಜಕೀಯ ದೊಂಬರಾಟಕ್ಕೆ ನಮ್ಮ ಬಳಸಿಕೊಳ್ಳಬೇಡಿ ಎಂದು ಅವರು ಮನವಿ ಮಾಡಿದರು.

ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ ಮಹೇಶ್ ಕುಮಾರ್ ಕೆ.ವಿ. ಮಾತನಾಡಿ, ಕಳೆದ ಬಾರಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿರುವ ಸುನೀಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ್ ಗೆಲ್ಲಲು ಸಾಧ್ಯವಿಲ್ಲ. ಮುತಾಲಿಕ್ ಅವರು ಯಾವುದೇ ಕಾರಣಕ್ಕೂ ರಾಜಕೀಯ ಬಲಿಪಶು ಆಗಬಾರದು. ಮುತಾಲಿಕ್ ಅವರು ತಮ್ಮ ನಿರ್ಧಾರವನ್ನು ಮರು ಪರಿಶೀಲನೆ ಮಾಡಿ ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಶ್ರೀರಾಮಸೇನೆ ಮುಖಂಡರಾದ ಚಂದ್ರಕಾಂತ್ ಶೆಟ್ಟಿ, ಸಂದೀಪ್ ಮೂಡಬೆಟ್ಟು, ಕೀರ್ತಿರಾಜ್, ಶ್ರೀನಿವಾಸ ರಾವ್, ಶಾರದಮ್ಮ, ಪ್ರಶಾಂತ್ ಬಂಗೇರ, ರಾಘವೇಂದ್ರ ಕೆಸವೆ ಮೊದಲಾದವರು ಉಪಸ್ಥಿತರಿದ್ದರು.

Similar News