ಅದಾನಿ ಗ್ರೂಪ್ ನ ಅಕ್ರಮ ಚಟುವಟಿಕೆಗಳಲ್ಲಿ ವಿನೋದ್ ಅದಾನಿ ಪ್ರಮುಖ ಪಾತ್ರ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ, ಫೆ.19: ಶೇರು ಮೌಲ್ಯದ ಕೃತ್ರಿಮ ಹೆಚ್ಚಳ ಹಾಗೂ ಲೆಕ್ಕಪತ್ರ ವಂಚನೆ ಕುರಿತ ವಿವಾದಕ್ಕೆ ಸಿಲುಕಿರುವ ಉದ್ಯಮ ದಿಗ್ಗಜ ಗೌತಮ್ ಆದಾನಿ (Gautam Adani)ಯ ಹಿರಿಯ ಸಹೋದರ ವಿನೋದ್ ಆದಾನಿ (Vinod Adani) ಅವರು ಆದಾನಿ ಗ್ರೂಪ್ ನ ಒಂದು ಕಂಪೆನಿಯ ಸಂಪತ್ತನ್ನು ಇನ್ನೊಂದು ಕಂಪೆನಿಗೆ ಸಾಲದ ರೂಪದಲ್ಲಿ ಅಕ್ರಮವಾಗಿ ವರ್ಗಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ್ದರೆಂದು ಕಾಂಗ್ರೆಸ್ ಪಕ್ಷ ರವಿವಾರ ಆಪಾದಿಸಿದೆ ಹಾಗೂ ಈ ಬಗ್ಗೆ ಭಾರತೀಯ ಶೇರು ನಿಯಂತ್ರಣ ಮಂಡಳಿ (ಸೆಬಿ) ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆಯಾಗಬೇಕೆಂದು ಆಗ್ರಹಿಸಿದೆ.
ಆದಾನಿ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರದ ವಿರುದ್ಧ ನಡೆಸುತ್ತಿರುವ ‘‘ ಹಮ್ ಆದಾನಿ ಕೆ ಹೈ ಕೌನ್’ ಅಭಿಯಾನದಡಿ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ (Jairam Ramesh) ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ತನ್ನ ಪಾತಕ ಚಟುವಟಿಕೆಗಳಲ್ಲಿ ವಿನೋದ್ ಆದಾನಿ ಮುಖ್ಯ ಪಾತ್ರವಹಿಸಿರುವುದನ್ನು ಅದಾನಿ ಗ್ರೂಪ್ ಮುಚ್ಚಿಹಾಕಲು ಯತ್ನಿಸುತ್ತಿದೆಯೆಂದು ಅವರು ಆರೋಪಿಸಿದ್ದಾರೆ.
‘‘ ಪ್ರಧಾನಿಯವರು ‘ಮೌನಿ ಬಾಬಾ’ (ಚೀನಾದ ಅತಿಕ್ರಮಣದ ವಿಷಯದಲ್ಲಿ ವರ್ತಿಸಿದಂತೆ) ಎಂಬ ಕಾರಣಕ್ಕಾಗಿ ನಾವು ಅವರಿಗೆ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದ್ದೇವೆಂದು ಭಾವಿಸಬಾರದು ಎಂದು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಹಮ್ ಆದಾನಿ ಹೈ ಕೌನ್-14 ಅಭಿಯಾನದಡಿ ಅವರು ಪ್ರಧಾನಿಯವರಿಗೆ ಮೂರು ಪ್ರಶ್ನೆಗಳನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದಾರೆ.
ಆದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿ ವಿದೇಶದಲ್ಲಿ ಬೇನಾಮಿ ಕಂಪೆನಿಗಳನ್ನು ನಿರ್ವಹಿಸುತ್ತಿದ್ದು, ಅವುಗಳ ಮೂಲಕ ಕೋಟ್ಯಂತರ ಡಾಲರ್ ಹಣವನ್ನು ಭಾರತದಲ್ಲಿ ಆದಾನಿಯವರ ಕಂಪೆನಿಗಳಿಗೆ ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಆದಾನಿ ಗ್ರೂಪ್ನ ಲಿಸ್ಟಡ್ ಕಂಪೆನಿಗಳು ಹಾಗೂ ಅಂಗಸಂಸ್ಥೆಗಳಲ್ಲಿ ವಿನೋದ್ ಆದಾನಿ ಯಾವುದೇ ಹುದ್ದೆಯನ್ನು ಹೊಂದಿಲ್ಲವ ಹಾಗೂ ಅವರಿಗೆ ಗ್ರೂಪ್ನ ದೈನಂದಿನ ವ್ಯವಹಾರಗಳಲ್ಲಿ ಯಾವುದೇ ಪಾತ್ರವಿಲ್ಲ’’ ಎಂದು ಅದಾನಿ ಗ್ರೂಪ್ ಜನವರಿ 29ರಂದು ಹೇಳಿಕೊಂಡಿದೆ ಹಗಾಊ ವಿನೋದ್ ಆದಾನಿಯಿಂದ ಅಂತರಕಾಯ್ದುಕೊಳ್ಳಲು ಯತ್ನಿಸುತ್ತಿದೆ. ಆದರೆ ವಿನೋದ್ ಆದಾನಿ ಅವರು ಈ ಉದ್ಯಮ ಸಮೂಹದ ಅವಿಭಾಜ್ಯ ಅಂಗವಾಗಿದ್ದಾರೆ.
ಅದಾನಿ ಗ್ರೂಪ್ ನಲ್ಲಿ ತನ್ನ ಹಿರಿಯ ಸಹೋದರನ ಪಾತ್ರದ ಕುರಿತು ನಿಮ್ಮ ಆಪ್ತಮಿತ್ರನು ಹೂಡಿಕೆದಾರರು ಹಾಗೂ ಸಾರ್ವಜನಿಕರಿಗೆ ಯಾಕೆ ಅಪ್ಪಟ ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಪ್ರಧಾನಿಯವರಿಗೆ ಟ್ವಿಟ್ಟರ್ ಮೂಲಕ ಸಲ್ಲಿಸಿರುವ ಪ್ರಶ್ನಾವಳಿಯಲ್ಲಿ ತಿಳಿಸಿದ್ದಾರೆ.
‘‘ ವಿವಿಧ ರಾಜಕೀಯ ಪಕ್ಷಗಳು, ಮಾಧ್ಯಮ ಹಾಗೂ ಅಣತಿಯಂತೆ ನಡೆಯಲು ಕೇಳದ ಉದ್ಯಮಿಗ ಳ ವಿರುದ್ಧ ನೀವು ವಿವಿಧ ತನಿಖಾ ಸಂಸ್ಥೆಗಳನ್ನು ತನಿಖೆಗಾಗಿ ಮುಕ್ತವಾಗಿ ನಿಯೋಜಿಸುತ್ತಿರುತ್ತೀರಿ. ಆದರೆ ನಿಮ್ಮ ಉದ್ಯಮಮಿತ್ರರನ್ನು ಪುರಾವೆ ಸಮೇತ ಹಿಡಿಯಲು ಯಾಕೆ ಅವುಗಳನ್ನು ಬಳಸುತ್ತಿಲ್ಲ? ಎಂದು ರಮೇಶ್ ಪ್ರಶ್ನಿಸಿದ್ದಾರೆ.
‘‘ಅಂಬುಜಾ ಸಿಮೆಂಟ್ಸ್ (Ambuja Cements) ಅನ್ನು ಆದಾನಿ ಗ್ರೂಪ್ ಖರೀದಿಸಿದಾಗ, ಅದು ಸೆಬಿಗೆ ಸಲ್ಲಿಸಿದ ಫೈಲಿಂಗ್ ನಲ್ಲಿ ಅಂಬುಜಾ ಸಿಮೆಂಟ್ಸ್ ನ ಅಂತಿಮ ಫಲಾನುಭವಿ ಮಾಲಕತ್ವವು ವಿನೋದ್ ಶಾಂತಿಲಾಲ್ ಆದಾನಿ ಹಾಗೂ ಅವರ ಪತ್ನಿ ರಂಜನಾ ಬೆನ್ ವಿನೋದ್ ಆದಾನಿ ಆಗಿರುವರು ಎಂದು ತಿಳಿಸಲಾಗಿದೆ. ಹೀಗಿದ್ದರೂ, ಇದೀಗ ಅದಾನಿ ಗ್ರೂಪ್, ವಿನೋದ್ ಆದಾನಿಯಿಂದ ಅಂತರಕಾಯ್ದುಕೊಳ್ಳಲು ಯತ್ನಿಸುತ್ತಿರುವುದು ನಗೆಪಾಟಲಿನ ವಿಷಯವಲ್ಲವೇ ’’ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಸಿಂಗಾಪುರದಿಂದ ಕಾರ್ಯಾಚರಿಸುತ್ತಿರುವ ವಿನೋದ್ ಆದಾನಿಯವರ ಪಿನಾಕಲ್ ಟ್ರೇಡ್ ಆ್ಯಂಡ್ ಇನ್ವೆಸ್ಟ್ಮೆಂಟ್ ಕಂಪೆನಿಯು ಆಸ್ಟ್ರೇಲಿಯದಲ್ಲಿರುವ ಆದಾನಿ ಗ್ರೂಪ್ನ ಹಲವಾರು ಆಸ್ತಿಗಳನ್ನು ನಿಯಂತ್ರಿಸುತ್ತಿದೆ. ಆದರೆ ಪಿನಾಕಲ್ ಕಂಪೆನಿಯು ರಶ್ಯದಲ್ಲಿ ಈಗ ಅಂತಾರಾಷ್ಟ್ರೀಯ ನಿರ್ಬಂಧಕ್ಕೊಳಗಾಗಿರುವ ವಿಟಿಬಿ ಬ್ಯಾಂಕ್ನೊಂದಿಗೆ 240 ಮಿಲಿಯ ಡಾಲರ್ ಮೊತ್ತದ ಸಾಲದ ಒಪ್ಪಂದ ಮಾಡಿಕೊಂಡಿತ್ತು. ಆ ಹಣವನ್ನು ಆದಾನಿ ಗ್ರೂಪ್ಗೆ ಸಂಬಂಧ ಹೊಂದಿರುವ ಕಂಪೆನಿಗೆ 235 ಮಿಲಿಯ ಡಾಲರ್ ಹಣವನ್ನು ಸಾಲವಾಗಿ ನೀಡಿತ್ತು. ಎಂಬುದನ್ನು ಫೋರ್ಬ್ಸ್ ಪತ್ರಿಕೆ ಬಹಿರಂಗಪಡಿಸಿದೆ’’ ಎಂದು ರಮೇಶ್ ಆರೋಪಿಸಿದರು.
ಇದು ಕೂಡಾ ಸೆಬಿ ಹಾಗೂ ಜಾರಿ ನಿರ್ದೇಶನಾಲಯದಿಂದ ತನಿಖೆಗೆ ಒಳಪಡಲು ಯೋಗ್ಯವಲ್ಲವೇ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.