×
Ad

ದಲಿತ ವಿದ್ಯಾರ್ಥಿ ಆತ್ಮಹತ್ಯೆ; ‘ಪರ್ಯಾಯ’ ತನಿಖೆಗೆ ಬಾಂಬೆ-ಐಐಟಿ ಸಮಿತಿ ರಚನೆ

Update: 2023-02-19 22:24 IST

ಮುಂಬೈ,ಫೆ.20: ಜಾತಿ ತಾರತಮ್ಯದಿಂದ ನೊಂದು ಪ್ರಥಮ ವರ್ಷದ ಬಿಟೆಕ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾದ ಘಟನೆಯ ಬಗ್ಗೆ ‘ಪರ್ಯಾಯ’ ತನಿಖೆ ನಡೆಸಲು ಭಾರತೀಯ ತಂತ್ರಜ್ಞಾನ ಸಂಸ್ಥೆ-ಬಾಂಬೆ ನಿರ್ಧರಿಸಿದೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಯೋಗ್ಯ ಮಾಹಿತಿಯಿದ್ದಲ್ಲಿ ಮುಂದೆ ಬಂದು ತಿಳಿಸುವಂತೆಯೂ ಅದು ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.

18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ(Darshan Solanki)ಯ ಆತ್ಮಹತ್ಯೆ ಪ್ರಕರಣದ ಕುರಿತ ತನಿಖಾ ಸಮಿತಿಯ ನೇತೃತ್ವವನ್ನು ಪ್ರೊಫೆಸರ್ ನಂದ ಕಿಶೋರ್(Nanda Kishore) ಅವರು ವಹಿಸಲಿದ್ದಾರೆ. ಬೋಧಕ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಎಸ್ಸಿ/ಎಸ್ಟಿ ವಿದ್ಯಾರ್ಥಿ ಘಟಕದ ಸದಸ್ಯರು, ಕೆಲವು ವಿದ್ಯಾರ್ಥಿ ಮಾರ್ಗದರ್ಶಕ ಸಮನ್ವಯಕಾರರು ಹಾಗೂ ಐಐಟಿ ಬಾಂಬೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕೂಡಾ ಸಮಿತಿಯಲ್ಲಿರುವರು ಎಂದು ಸಂಸ್ಥೆಯ ನಿರ್ದೇಶಕ ಸುಭಾಷಿಸ್ ಚೌಧುರಿ(subhasish chowdhury) ಶನಿವಾರ ತಿಳಿಸಿದ್ದಾರೆ. 

ಪರಿಶಿಷ್ಟ ಜಾತಿಗೆ ಸೇರಿದವರಾದ ದರ್ಶನ್ ಸೋಲಂಕಿ ಅವರು ಫೆಬ್ರವರಿ 12ರಂದು ಐಐಟಿಯ ಪೊವಾಯ್ ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆದರೆ ಅವರ ಕುಟುಂಬಿಕರು ಆತನ ಸಾವಿನ ಹಿಂದಿರುವ ಕಾರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಆತ ಬಾಂಬೆ-ಐಐಟಿಯಲ್ಲಿ ಜಾತಿ ತಾರತಮ್ಯವನ್ನು ಎದುರಿಸಿದ್ದನೆಂದು ಆತನ ಕುಟುಂಬಿಕರು ಆರೋಪಿಸಿದ್ದಾರೆ.

ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊವಾಯ್ ಪೊಲೀಸರು ಅಹ್ಮದಾಬಾದ್ನಲ್ಲಿರುವ ಸೋಲಂಕಿ ಮನೆಗೆ ಭೇಟಿ ನೀಡಿ ವಿವರಗಳನ್ನು ಸಂಗ್ರಹಿಸಿದ್ದಾರೆ.

ದರ್ಶನ್ ಸೋಲಂಕಿಯ ದುರಂತಮಯ ಸಾವಿನ ಹಿಂದಿರು ಕಾರಣಗಳು, ಘಟನೆಗಳು ಹಾಗೂ ಪರಿಸ್ಥಿತಿಯ ಬಗ್ಗೆ ಐಐಟಿ ಬಾಂಬೆ ಹಾಗೂ ಪೊಲೀಸರು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಹಲವಾರು ಮಂದಿಯನ್ನು ಭೇಟಿಯಾಗಿ ಮಾಹಿತಿ ಕಲೆ ಹಾಕಿದ್ದಾರೆ , ಸೋಲಂಕಿಯ ಫೋನ್ ಹಾಗೂ ಲ್ಯಾಪ್ಟಾಪನ್ನು ಫಾರೆನ್ಸಿಕ್ ವಿಶ್ಲೇಷಣೆಗಾಗಿ ಕಳುಹಿಸಿಕೊಡಲಾಗಿದೆಯೆಂದು ಚೌಧರಿ ತಿಳಿಸಿದ್ದಾರೆ.

Similar News