×
Ad

ಬಾಲಿವುಡ್‌ ನಟ ನವಾಝುದ್ದೀನ್‌ ಸಿದ್ದಿಕಿ ವಿರುದ್ಧ ಮನೆ ಕೆಲಸದಾಕೆಯಿಂದ ಗಂಭೀರ ಆರೋಪ: ವೀಡಿಯೊ ವೈರಲ್

Update: 2023-02-20 13:37 IST

ಹೊಸ ದಿಲ್ಲಿ: ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ತಮ್ಮ 20 ವರ್ಷದ ಮನೆ ಸೇವಕಿಯನ್ನು ಅನ್ನಾಹಾರ ಸೌಲಭ್ಯ ಒದಗಿಸದೆ ದುಬೈನಲ್ಲಿ ಅನಾಥವಾಗಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ದುಬೈನಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಆರೈಕೆಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ನೇಮಿಸಿಕೊಂಡಿದ್ದ ಸಪ್ನ ರಾಬಿನ್ ಮಸೀಹ್ ಎಂಬ ಮನೆ ಸೇವಕಿಯು ಒಂದು ತಿಂಗಳಿನಿಂದ ಏಕಾಂಗಿಯಾಗಿ ವಾಸಿಸುತ್ತಿದ್ದು, ಆಕೆಯನ್ನು ಮರಳಿ ಕರೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆಕೆಗೆ ನೆರವು ಒದಗಿಸುತ್ತಿರುವ ವಕೀಲರೊಬ್ಬರು ತಿಳಿಸಿದ್ದಾರೆ ಎಂದು mid-day.com ವರದಿ ಮಾಡಿದೆ.

ನವಾಝುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ಸಿದ್ದಿಕಿ ಅವರ ವಕೀಲ ರಿಝ್ವಾನ್ ಸಿದ್ದಿಕೀ ಪ್ರಕಾರ, ಮಸೀಹ್‌ಳನ್ನು ಪ್ರವಾಸಿ ವೀಸಾದೊಂದಿಗೆ ನವೆಂಬರ್ ತಿಂಗಳಲ್ಲಿ ದುಬೈಗೆ ಕರೆದುಕೊಂಡು ಹೋಗಲಾಗಿತ್ತು. ಫೆಬ್ರವರಿ ತಿಂಗಳಲ್ಲಿ ಆಕೆಗೆ  ಉದ್ಯೋಗ ವೀಸಾ ದೊರಕಿಸಿಕೊಡಲಾಗಿದ್ದು, ಅದರಲ್ಲಿ ಆಕೆಯ ಹುದ್ದೆಯನ್ನು ಅನಾಮಿಕ ಕಂಪನಿಯೊಂದರ ಮಾರಾಟ ವ್ಯವಸ್ಥಾಪಕಿ ಎಂದು ಉಲ್ಲೇಖಿಸಲಾಗಿದೆ.  ಆಲಿಯಾ ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರ ಭಾರತಕ್ಕೆ ಮರಳಿದ್ದರೆ, ಆಕೆಯ ಮಕ್ಕಳು ಜನವರಿ ತಿಂಗಳ ಕೊನೆಯ ವಾರ ಭಾರತಕ್ಕೆ ಹಿಂದಿರುಗಿದ್ದರು ಎಂದು ಹೇಳಿದ್ದಾರೆ.

ಸದ್ಯ ಮಸೀಹ್ ದುಬೈ ಮನೆಯಲ್ಲಿ ಏಕಾಂಗಿಯಾಗಿದ್ದು, ಅದರ ಬಾಡಿಗೆಯನ್ನು ಇನ್ನೂ ಪಾವತಿಸಿಲ್ಲ. ಆಕೆಗೆ ಮನೆಯಲ್ಲಿ ತಿನ್ನಲು ಏನೂ ಇಲ್ಲ. ವ್ಯಂಗ್ಯವೆಂದರೆ, ಆಕೆಗೆ ನಿವಾಸಿ ವೀಸಾ ನೀಡಲಾಗಿದ್ದರೂ, ಮನೆಯಲ್ಲಿ ತಿನ್ನಲು ಏನೂ ಇಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೃತಸರದವಳಾದ ಮಸೀಹ್, ತನ್ನ ವ್ಯಥೆಯನ್ನು ವಿಡಿಯೊ ಮೂಲಕ ಹೇಳಿಕೊಂಡಿದ್ದು, ನೆರವಿಗಾಗಿ ಅದನ್ನು ರಿಝ್ವಾನ್ ಸಿದ್ದಿಕಿಗೆ ರವಾನಿಸಿದ್ದಾಳೆ. ಆ ವಿಡಿಯೊವೀಗ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಲು ನವಾಝುದ್ದೀನ್ ಸಿದ್ದಿಕಿಯ ವ್ಯವಸ್ಥಾಪಕ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

Similar News