×
Ad

ಪೂರ್ವ ಆಫ್ರಿಕಾದಲ್ಲಿ ‘ಕೇರಳ ಬ್ಲಾಕ್’ ಹೆಸರಿನ ಶಾಲೆಯನ್ನು ನಿರ್ಮಿಸಿದ ಮಲಯಾಳಿ ದಂಪತಿ

Update: 2023-02-20 18:30 IST

ಹೊಸದಿಲ್ಲಿ: ಪೂರ್ವ ಆಫ್ರಿಕಾದ ಮಲಾವಿಯ ಚಿಸಸಿಲಾ ಗ್ರಾಮದಲ್ಲಿಯ ಶಾಲಾ ಕಟ್ಟಡವನ್ನು ‘ಕೇರಳ ಬ್ಲಾಕ್’ ಹೆಸರಿನಿಂದ ಕರೆಯಲಾಗುತ್ತಿದೆ. ಅರುಣ್ ಅಶೋಕನ್ ಮತ್ತು ಸುಮಿ ಈ ಹೆಸರು ಮತ್ತು ಕಟ್ಟಡಕ್ಕೆ ಮಲಯಾಳಿ ಸಂಬಂಧದ ಹಿಂದಿರುವ ಯುವದಂಪತಿ.

ನಿರ್ಮಾಣ ಸಂಸ್ಥೆಯೊಂದರಲ್ಲಿ ಸೂಪರ್ವೈಸರ್ ಆಗಿರುವ ಕೇರಳದ ಮಲಪ್ಪುರಂ ನಿವಾಸಿ ಅರುಣ್ (30) ನಾಲ್ಕು ವರ್ಷಗಳ ಹಿಂದೆ ಕರ್ತವ್ಯ ನಿಮಿತ್ತ ಮಲಾವಿಗೆ ತೆರಳಿದ್ದರು. ಎರಡು ವರ್ಷಗಳ ಹಿಂದೆ ಅಣೆಕಟ್ಟು ನಿರ್ಮಾಣ ಯೋಜನೆಗಾಗಿ ಚಿಸಸಿಲಾಕ್ಕೆ ಸ್ಥಳಾಂತರಗೊಂಡಿದ್ದರು. ಅಲ್ಲಿ ಗ್ರಾಮದ ಪ್ರಾಥಮಿಕ ಶಾಲೆಯಾಗಿದ್ದ ಮಳೆ ಬಂದರೆ ಸೋರುವ ಹುಲ್ಲಿನಿಂದ ಮಾಡಿದ್ದ ಶೆಡ್ ಅವರ ಕಣ್ಣಿಗೆ ಬಿದ್ದಿತ್ತು. ತವರು ರಾಜ್ಯ ಕೇರಳದಲ್ಲಿಯ ಶಾಲೆಗಳ ಚಿತ್ರಗಳು ಅವರ ಮನಸ್ಸಿನಲ್ಲಿ ಸುಳಿದಾಡಿದಾಗ ಈ ಶಾಲೆಯ ಸ್ಥಿತಿಯನ್ನು ಸುಧಾರಿಸಲು ಏನನ್ನಾದರೂ ಮಾಡಬೇಕು ಎಂದು ಅವರು ನಿರ್ಧರಿಸಿದ್ದರು.

ಸರಕಾರಿ ಶಾಲೆ ಗ್ರಾಮದಿಂದ ಹಲವಾರು ಕಿ.ಮೀ. ದೂರವಿದ್ದು, ಮಕ್ಕಳು ಅಷ್ಟು ದೂರ ನಡೆಯುವುದನ್ನು ತಪ್ಪಿಸಲು ಸಮುದಾಯದ ಜನರೇ ಈ ಶೆಡ್ ಶಾಲೆಯನ್ನು ವ್ಯವಸ್ಥೆ ಮಾಡಿದ್ದರು.

ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಅರುಣರ ಆರಂಭಿಕ ಯೋಜನೆಯಲ್ಲಿ ಸೇರಿರಲಿಲ್ಲ. ವಿದ್ಯಾರ್ಥಿಗಳು ಚಿಕ್ಕಮಕ್ಕಳಾಗಿದ್ದು, ಅವರಿಗೆ ಇದಕ್ಕಿಂತಲೂ ಉತ್ತಮವಾದುದು ದೊರೆಯಬೇಕು ಎನ್ನುವುದು ಅರುಣ್ ಅವರ ನಿರ್ಧಾರವಾಗಿತ್ತು. ಹಾಲಿ ಶೆಡ್ಗೇ ಸರಿಯಾದ ತಗಡಿನ ಶೀಟ್ ಹೊದಿಸಲು ಅವರು ಮೊದಲು ಯೋಚಿಸಿದ್ದರು, ಆದರೆ ನಂತರ ಮಕ್ಕಳಿಗಾಗಿ ಒಳ್ಳೆಯ ಕಟ್ಟಡವನ್ನೇ ನಿರ್ಮಿಸಲು ನಿರ್ಧರಿಸಿದ್ದರು.

ಯುಎಇಯಲ್ಲಿದ್ದ ತನ್ನ ಸ್ನೇಹಿತ ಆಶಿಕ್ ಗೆ ಕರೆ ಮಾಡಿದ್ದ ಅರುಣ್ ಶಾಲೆ ನಿರ್ಮಾಣದ ವಿಚಾರವನ್ನು ಹಂಚಿಕೊಂಡು, ಅಗತ್ಯವಾದಾಗ ನೆರವಾಗುವಂತೆ ಕೋರಿದ್ದರು. ಅಲ್ಲಿಯವರೆಗೆ ಕಾಯುವುದು ಏಕೆ ಎಂದು ಪ್ರಶ್ನಿಸಿದ್ದ ಆಶಿಕ್ ಎಲ್ಲ ನೆರವು ಒದಗಿಸುವ ಭರವಸೆ ನೀಡಿದ್ದರು. ಯೋಜನೆಗೆ ಹಣಕಾಸಿನ ದೇಣಿಗೆಯನ್ನೂ ನೀಡಿದ್ದರು.

ಅರುಣ್ ಗ್ರಾಮಸ್ಥರೊಂದಿಗೆ ಮಾತನಾಡಿದಾಗ ಮಾನವ ಸಂಪನ್ಮೂಲ ಒದಗಿಸಲು ಅವರು ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಅವರೇ ಸ್ವತಃ ಇಟ್ಟಿಗೆಗಳನ್ನು ತಯಾರಿಸಿದ್ದರು. ತನ್ನ ವೇತನದಲ್ಲಿ ಉಳಿಸಿದ್ದ ಸ್ವಲ್ಪ ಹಣದಿಂದ ಅರುಣ್ ತನ್ನ ಕನಸಿನ ಶಾಲೆಯ ನಿರ್ಮಾಣವನ್ನು ಆರಂಭಿಸಿದ್ದರು. ಕ್ರಮೇಣ ಅವರ ಸ್ನೇಹಿತ ಹಾಗೂ ಸಹೋದ್ಯೋಗಿಯೂ ಆದ ಸಿವಿಲ್ ಇಂಜಿನಿಯರ್ ಕೆನ್ನೆತ್ ಫ್ರಾನ್ಸಿಸ್ ಅವರು ಅರುಣ್ ಜೊತೆ ಕೈಜೋಡಿಸಿದ್ದರು.

ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದಾಗ ಕೇರಳಕ್ಕೆ ಮರಳಿದ್ದ ಅರುಣ ಸುಮಿಯವರನ್ನು ವಿವಾಹವಾಗಿದ್ದರು. ಅವರು ಚಿಸಸಿಲಾಕ್ಕೆ ವಾಪಸಾದಾಗ ಅವರಿಗೆ ಬೆಂಬಲವಾಗಿ ಸುಮಿ ಇದ್ದರು. ಗ್ರಾಮಸ್ಥರೊಂದಿಗೆ ಸೇರಿಕೊಂಡು ಅರುಣ ದಂಪತಿ ಮತ್ತು ಕೆನ್ನೆತ್ ಶಾಲೆಯ ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ಅವರ ಈ ಉದಾತ್ತ ಕಾರ್ಯದ ಬಗ್ಗೆ ಕೇಳಿದ ಹಲವರು ಬಂದು ಹಣಕಾಸಿನ  ಕೊಡುಗೆಯನ್ನು ಮುಂದಿರಿಸಿದ್ದರು,ಆದರೆ ದಂಪತಿ ಯಾರಿಂದಲೂ ಹಣವನ್ನು ಸ್ವೀಕರಿಸಿರಲಿಲ್ಲ.
ಫೆ.17ರಂದು ಶಾಲೆ ಉದ್ಘಾಟನೆಗೊಂಡು ತರಗತಿಗಳು ಆರಂಭಗೊಂಡಿವೆ. ಅಲ್ಲಿಯವರೆಗೆ ಶಾಲೆಯು ಅಧಿಕೃತ ಮಾನ್ಯತೆಯನ್ನು ಹೊಂದಿರಲಿಲ್ಲ,ಅಂದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ದೂರದ ಶಾಲೆಗೆ ಹೋಗುವುದು ಅನಿವಾರ್ಯವಾಗಿತ್ತು. ದಂಪತಿಯ ಪ್ರಯತ್ನದಿಂದ ಶಾಲೆಗೆ ಸರಿಯಾದ ಕಟ್ಟಡ ದೊರಕಿದೆ ಎನ್ನುವುದನ್ನು ಮನಗಂಡ ಶಿಕ್ಷಣ ಇಲಾಖೆಯು ಎಂಟನೇ ತರಗತಿಯವರೆಗೆ ಮಾನ್ಯತೆಯನ್ನು ನೀಡಿದೆ.

ಅರುಣ್ ಮತ್ತು ಅವರ ತಂಡ ತಮ್ಮ ಕೆಲಸ ಆರಂಭಿಸಿದ ಬಳಿಕ ಅವರ ಕಂಪನಿಯೂ ಮುಂದೆ ಬಂದು ಶಾಲೆಗಾಗಿ ಇನ್ನೊಂದು ಸಣ್ಣ ಕಟ್ಟಡವನ್ನು ನಿರ್ಮಿಸಿದೆ. ಕೋವಿಡ್ ಸಂಬಂಧಿತ ಕೆಲಸಕ್ಕಾಗಿ ಗ್ರಾಮದಲ್ಲಿದ್ದ ವಿಶ್ವಸಂಸ್ಥೆಯ ತಂಡವೂ ಒಂದು ಕೋಣೆಯನ್ನು ನಿರ್ಮಿಸಿದೆ.

ಅರುಣ್ ದಂಪತಿಗಳು ಮಲಾವಿ ಡೈರೀಸ್ ಎಂಬ ಯೂಟ್ಯೂಬ್ ಚಾನೆಲ್ ಅನ್ನೂ ನಡೆಸುತ್ತಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಗ್ರಾಮದ ಮಕ್ಕಳೊಂದಿಗೆ ಬೆರೆತು ಅವರ ಜ್ಞಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ.

ಕೃಪೆ: thenewsminute.com

Similar News