ತೆಲಂಗಾಣ: ದಿನಗೂಲಿ ನೌಕರನ ಕಸ್ಟಡಿ ಸಾವು; ನಾಲ್ವರು ಪೊಲೀಸರ ಅಮಾನತು

Update: 2023-02-20 15:38 GMT

ಹೈದರಾಬಾದ್, ಫೆ. 20: ಪೊಲೀಸ್ ಕಸ್ಟಡಿಯಲ್ಲಿ ದಿನಗೂಲಿ ನೌಕರ ಮುಹಮ್ಮದ್ ಖಾದಿರ್ ಚಿತ್ರ ಹಿಂಸೆಯಿಂದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ತೆಲಂಗಾಣದ ಮೇದಕ್  ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ರವಿವಾರ ಅಮಾನತು ಮಾಡಲಾಗಿದೆ. 

ಮೇದಕ್ ಪಟ್ಟಣದ ಸರ್ಕಲ್ ಇನ್ಸ್‌ಪೆಕ್ಟರ್ ಮಧು, ಸಬ್ ಇನ್ಸ್‌ಪೆಕ್ಟರ್ ರಾಜಶೇಖರ್ ಹಾಗೂ ಕಾನ್ಸ್‌ಟೆಬಲ್‌ಗಳಾದ ಪ್ರಶಾಂತ್ ಹಾಗೂ ಪವನ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮೇದಕ್ ಪೊಲೀಸ್ ಅಧೀಕ್ಷಕರಾದ ರೋಹಿಣಿ ಪ್ರಿಯದರ್ಶಿನಿ ಹೇಳಿದ್ದಾರೆ. 

ಘಟನೆಯ ಕುರಿತು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸುವಂತೆ ಡಿಜಿಪಿ ಅಂಜನಿ ಕುಮಾರ್ ಅವರು ಆದೇಶಿಸಿದ ಒಂದು ದಿನದ ಬಳಿಕ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲು ಐಜಿಪಿ ಚಂದ್ರಶೇಖರ್ ರೆಡ್ಡಿ ಆದೇಶಿಸಿದ್ದಾರೆ. ತನಿಖೆಯನ್ನು ಕೆಮರೆಡ್ಡಿ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ನೀಡುವಂತೆ ಹಾಗೂ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಡಿಜಿಪಿ ಅವರು ಐಜಿಪಿಗೆ ನಿರ್ದೇಶಿಸಿದ್ದರು. ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್‌ಗಳ ವಿರುದ್ಧ ಶಿಸ್ತು ಕ್ರಮಗಳನ್ನು ಆರಂಭಿಸಲಾಗಿದೆ ಎಂದು  ಪೊಲೀಸ್ ವರಿಷ್ಠರು ಪ್ರಕಟಿಸಿದ್ದಾರೆ.  

ಪೊಲೀಸ್ ಚಿತ್ರಹಿಂಸೆಯಿಂದ ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಖಾದಿರ್(35) ಶುಕ್ರವಾರ ಮೃತಪಟ್ಟಿದ್ದರು. ಕಳವು ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಮುಹಮ್ಮದ್ ಖಾದಿರ್‌ನನ್ನು ಹೈದರಾಬಾದ್‌ನಲ್ಲಿರುವ ಆತನ ಅಕ್ಕನ ಮನೆಯಿಂದ ಜನವರಿ 29ರಂದು ಅಪಹರಿಸಲಾಗಿತ್ತು. ‘‘ಆತನನ್ನು ಪೊಲೀಸರು ಮೇದಕ್‌ಗೆ ಕರೆದೊಯ್ದು ಐದು ದಿನಗಳ ಕಾಲ ಅಕ್ರಮ ಬಂಧನದಲ್ಲಿರಿಸಿ ಚಿತ್ರ ಹಿಂಸೆ ನೀಡಿದ್ದಾರೆ. ಫೆಬ್ರವರಿ 2ರಂದು ಬಿಡುಗಡೆ ಮಾಡಿದ್ದರು’’ಎಂದು ಆತನ ಕುಟುಂಬ ಆರೋಪಿಸಿದೆ. 

‘‘ಪೊಲೀಸರ ಚಿತ್ರಹಿಂಸೆಯಿಂದಾಗಿ ಖಾದಿರ್‌ಗೆ ನೇರವಾಗಿ ನಿಂತುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಆತನ ಮೂತ್ರಕೋಶಕ್ಕೆ ಹಾನಿ ಉಂಟಾಗಿತ್ತು. ಫೆಬ್ರವರಿ 9ರಂದು ಆತನನ್ನು ಮೇದಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಖಾದಿರ್ ಅವರ ದೇಹಸ್ಥಿತಿ ಹದಗೆಡುತ್ತಿದ್ದಂತೆ ಆತನನ್ನು ಉತ್ತಮ ಚಿಕಿತ್ಸೆಗಾಗಿ ಹೈದರಾಬಾದ್‌ನಲ್ಲಿರುವ ಗಾಂಧಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಗಂಭೀರ ಗಾಯಗೊಂಡ ಆತ ಫೆಬ್ರವರಿ 17ರಂದು ಮೃತಪಟ್ಟ. ಆತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 
ಮರಣೋತ್ತರ ಪರೀಕ್ಷೆಯ ಬಳಿಕ ಖಾದಿರ್‌ನ ಮೃತದೇಹವನ್ನು ಶನಿವಾರ ಬೆಳಗ್ಗೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಮೇದಕ್‌ನಲ್ಲಿ ನೆರವೇರಿತ್ತು.

Similar News